ಜಿಲ್ಲೆ

ಮೈಕ್ರೋಫೈನಾನ್ಸ್ ಹಾವಳಿಗೆ ಬ್ರೇಕ್​​​; ರಾಜ್ಯಪಾಲರಿಂದ ಸುಗ್ರೀವಾಜ್ಞೆಗೆ ಅನುಮೋದನೆ | Micro Finance

ಬೆಂಗಳೂರು: ಮೈಕ್ರೋ ಫೈನಾನ್ಸ್(Micro Finance) ಸುಗ್ರೀವಾಜ್ಞೆ ಸಂಬಂಧ ರಾಜ್ಯಪಾಲರು ಕೇಳಿದ್ದ ಪ್ರಶ್ನೆಗಳಿಗೆ ಸುದೀರ್ಘ ಹಾಗೂ ಸಮರ್ಪಕ ಸ್ಪಷ್ಟನೆಗಳೊಂದಿಗೆ ರಾಜ್ಯ ಸರ್ಕಾರ ಸೋಮವಾರ ಕಡತವನ್ನು ರಾಜ್ಯಪಾಲರ ಅನುಮೋದೆಗಾಗಿ ರವಾನಿಸಿತ್ತು. ಇಂದು (ಬುಧವಾರ, ಫೆಬ್ರವರಿ 12) ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಣೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​​ ಅವರು ಹಲವು ಸಲಹೆಗಳನ್ನು ನೀಡಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಣೆಗೆ ಅನುಮೋದನೆ ನೀಡಿದ್ದಾರೆ. ಸಲಹೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಇದರಿಂದ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ರಾಜ್ಯಪಾಲರು ನೀಡಿದ ಸೂಚನೆಗಳೇನು?

  • ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಸಮಯದಲ್ಲಿ, ರಾಜ್ಯ ಸರ್ಕಾರವು ಕೆಲವು ಅಗತ್ಯ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು.
  • ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಸಹ, ಸುಗ್ರೀವಾಜ್ಞೆಯ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಎರಡೂ ಸದನಗಳಲ್ಲೂ ವಿವರವಾಗಿ ಚರ್ಚಿಸಬೇಕಾಗಿದೆ.
  • ಕಾನೂನಾತ್ಮಕ, ಅಧಿಕೃತ, ನೊಂದಾಯಿತ, ನಿಯಂತ್ರಿತ ಸಂಸ್ಥೆಗಳು, ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಬ್ಯಾಂಕುಗಳ ವ್ಯವಹಾರ ಶಾಖೆಗಳು), ಆರ್‌ಬಿಐ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ವಸತಿ ಹಣಕಾಸು ನಿಗಮಗಳು ಈ ಕಾನೂನಿನ ತಪ್ಪು ವ್ಯಾಖ್ಯಾನ ಅಥವಾ ದುರುಪಯೋಗದಿಂದ ಕಿರುಕುಳಕ್ಕೊಳಗಾಗಬಾರದು.
  • ಈಗಾಗಲೇ ಕಾನೂನುಬದ್ಧ ಬಡ್ಡಿ ಸಾಲ ಕೊಟ್ಟಿರುವ ಅಧಿಕೃತ ಹಣಕಾಸು ಸಂಸ್ಥೆಗಳ ಸಾಲ‌ ವಸೂಲಾತಿಗೆ ತೊಂದರೆ ಆಗದಂತೆ ನಿಗಾ ವಹಿಸತಕ್ಕದ್ದು. ಕಾನೂನುಬದ್ಧ ಮತ್ತು ನಿಜವಾದ ಸಾಲದಾತರು ತೊಂದರೆಯನ್ನು ಎದುರಿಸದಂತೆ, ಅವರ ಸಾಲದ ಬಾಕಿ ಮೊತ್ತವನ್ನು ಮರುಪಡೆಯಲು ಅವಕಾಶ ಕೊಡಬೇಕು. ಈಗಾಗಲೇ ಸಾಲ‌ ಕೊಟ್ಟಿರುವ ನೊಂದಾಯಿತ ಸಂಸ್ಥೆಗಳ ಸಾಲ ಮರುಪಾವತಿಗೆ ಯಾವುದೇ ಪರಿಹಾರವಿಲ್ಲದಿದ್ದರೆ, ಇದು ಮುಂದೆ ಕಾನೂನು ವ್ಯಾಜ್ಯಗಳಿಗೆ ದಾರಿ ಮಾಡಿಕೊಡಲಿದೆ.
  • ಯಾವುದೇ ವ್ಯಕ್ತಿ ತನ್ನ ಹಕ್ಕುಗಳು ಮತ್ತು ಕಾನೂನು ಪರಿಹಾರಗಳಿಗಾಗಿ ಹೋರಾಡುವುದನ್ನು ತಡೆಯುವುದು ಭಾರತದ ಸಂವಿಧಾನದ 19 ಮತ್ತು 32ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು. ಆದ್ದರಿಂದ ರಾಜ್ಯ ಸರ್ಕಾರವು ಈ ಅಂಶದ ಬಗ್ಗೆ ಪುನರ್ವಿಮರ್ಶಿಸಬೇಕು ಮತ್ತು ಈ ನಿಟ್ಟಿನಲ್ಲಿ ಸರಿಪಡಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.