ಜಿಲ್ಲೆ

ಸರ್ಕಾರದ ನಿರ್ಲಕ್ಷ್ಯದಿಂದ ಕನ್ನಡಕ್ಕೆ ಕುತ್ತು ಡಾ.ಎನ್‌.ಆರ್‌.ನಾಯಕ ಆಕ್ರೋಶ

Uttara Kannada - Subash Hegde

ಹೊನ್ನಾವರ: ಕನ್ನಡ ಭಾಷೆಯ ಬೆಳವಣಿಗೆಗೆ ಸರ್ಕಾರವು ಮಹತ್ವ ನೀಡುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಕನ್ನಡಕ್ಕೆ ಕುತ್ತು ಬಂದಿದೆ' ಎಂದು ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕ ಹೇಳಿದರು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಅಂಗವಾಗಿ ಶುಕ್ರವಾರ ಆಯೋಜಿಸಿದಕನ್ನಡ ಭಾಷಾ ಅಭಿವೃದ್ದಿ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯು ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಈ ಭಾಷೆಯ ನಿರ್ಲಕ್ಷವಾಗುತ್ತಿದೆ. ರಾಜಕಾರಣಿಗಳು ಇಂದಿನ ಬರಗಾಲದಲ್ಲಿಯೂ ತಮ್ಮ ಮನೆಯ ಖಜಾನೆಗಳನ್ನು ತುಂಬಿಕೊಳ್ಳುತ್ತಿದ್ದಾರೆ. ಎಲ್ಲೂ ಸಲ್ಲದವರು ರಾಜಕಾರಣಕ್ಕೆ ಸಲ್ಲುತ್ತಾರೆ ಎಂಬ ಮಾತಿನಂತೆ ನಾಡಿನ ಕುರಿತ ಅಭಿಮಾನವಿಲ್ಲದ ಅಪ್ರಬುದ್ದರು ರಾಜಕಾರಣಕ್ಕೆ ಬಂದಾಗ ನಮ್ಮ ನಾಡು ನುಡಿಗೆ ತೊಂದರೆಯಾಗುತ್ತಿದೆ. ಕನ್ನಡವು ಪರಿಶುದ್ದವಾದ ಭಾಷೆ; ಕನ್ನಡದ ಬೆಳಕು ಜಗತ್ತಿನಾದ್ಯಂತ ಪಸರಿಸಬೇಕು. ಇದಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡದ ಅಭಿವೃದ್ಧಿಗೆ ಸರ್ಕಾರ, ಸಂಘಟನೆ, ಜನರು ಭಾಗಿಗಳಾಗಬೇಕು ಎಂದರು.
ಪ್ರಾಚಾರ್ಯೆ ಡಾ. ಶಿಲ್ಪಾ ಎಚ್.ಆರ್., ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಜೀನತ್ ಕಣವಿ, ಶಂಕರ ಗೌಡ ಹುಡ್ಕಣಿ, ಕರವೇ ಮಂಜುನಾಥ ಗೌಡ, ನಾರಾಯಣ ಹೆಗಡೆ, ಮಹೇಶ ಭಂಡಾರಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.