ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯನ್ನು ಪರಿಶ್ರಮದಿಂದ ಕಟ್ಟಿ ಬೆಳೆಸಿದ ಶಾಸಕ ಪ್ರದೀಪ್ ಈಶ್ವರ್ ಸರ್ಕಾರಿ ಶಾಲಾ ಕಾಲೇಜು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಯೋಜನೆಗಳ ಪೈಕಿ ಸೂಪರ್ 60 ಒಂದು. ಬೆಂಗಳೂರಿನ ಕೇಂದ್ರದಲ್ಲಿ ಸರ್ಕಾರಿ ಶಾಲೆಯ 60 ವಿದ್ಯಾರ್ಥಿಗಳು ಮತ್ತು 60 ವಿದ್ಯಾರ್ಥಿನಿಯರಿಗೆ ಜನವರಿಯಿಂದ ಮಾರ್ಚ್ ವರೆಗೆ ಮೂರ್ನಾಲ್ಕು ತಿಂಗಳ ಕಾಲ ಉಚಿತ ಊಟ, ವಸತಿಯೊಂದಿಗೆ ಹೈಟೆಕ್ ವ್ಯವಸ್ಥೆಯಲ್ಲಿ ಶೈಕ್ಷಣಿಕ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕೆ ಚೆನ್ನಾಗಿ ಓದುವಂತಹ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳು ಸಹ ಖಾಸಗೀ ಶಾಲೆಗಳ ಮಕ್ಕಳ ಮಾದರಿಯಲ್ಲಿ ಟಾಪರ್‌ಗಳಾಗಿ, ಹೊರ ಹೊಮ್ಮಬೇಕೆಂಬುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು
ಸರ್ಕಾರಿ ಶಾಲಾ ಕಾಲೇಜುಗಳ ಪಲಿತಾಂಶ ಸುಧಾರಣೆಯಾಗಿ ಗಮನ ಸೆಳೆಯಬೇಕು. ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಬಡ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯ ನೀಡಲಾಗುತ್ತಿದೆ. ಈಗಾಗಲೇ ಮುಖ್ಯಶಿಕ್ಷಕರನ್ನೊಳಗೊಂಡಂತೆ ಸಭೆಯನ್ನು ಕೈಗೊಂಡು ಕ್ರಿಯಾಶೀಲ ಯೋಜನಾ ಚಟುವಟಿಕೆಯ ಬಗ್ಗೆ ಶಾಸಕರು ಚರ್ಚಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಕ್ಷೇತ್ರದ 1800 ಮಕ್ಕಳಿಗೆ ಷೆಡ್ಯೂಲ್‌ನಲ್ಲಿ ಉತ್ತಮ ತರಬೇತಿ ನೀಡಲು ಸೂಚಿಸಿದ್ದಾರೆ. ಪ್ರತಿ ವರ್ಷ ಸರ್ಕಾರಿ ಶಾಲಾ ಕಾಲೇಜುಗಳ ನಿರ್ವಹಣೆಗೆ ಕೋಟ್ಯಂತರ ರೂ ವೆಚ್ಚವಾಗುತ್ತಿದೆ. ಇದು ಖಾಸಗೀ ಶಾಲಾ ಕಾಲೇಜುಗಳಿಗೆ ಹೋಲಿಸಿದ್ದಲ್ಲಿ ದುಬಾರಿ. ಇದರ ನಡುವೆ ಸಾಧನೆಯಲ್ಲಿ ಹಿಂದುಳಿದಿರುವುದನ್ನು ಸರಿಪಡಿಸಲು ಶ್ರಮಿಸಲಾಗುತ್ತಿದೆ.
ತಲಾ 1 ಸಾವಿರ ವಿತರಣೆ
ವೈಯಕ್ತಿಕವಾಗಿ ಸರ್ಕಾರಿ, ಅನುದಾನಿತ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರೂ ವಿದ್ಯಾರ್ಥಿ ವೇತನ ವಿತರಣೆ. ಅದು ಬರೋಬ್ಬರಿ 5 ವರ್ಷ. ಹಾಗೆಯೇ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೂ ಸೌಲಭ್ಯ ಸಿಗಲಿದೆ. ಇದರೊಂದಿಗೆ ಒಂದು ವರ್ಷಕ್ಕೆ ಹತ್ತನೇ ತರಗತಿ ಮಕ್ಕಳಿಗೆ 18 ಲಕ್ಷ ರೂ ಮತ್ತು ಪದವಿ ವಿದ್ಯಾರ್ಥಿಗಳಿಗೆ 24 ಲಕ್ಷ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಗೈಡ್ ಇಲ್ಲವೇ ಪರಿಕರ ಖರೀದಿ
ಬಹಳಷ್ಟು ಬಡ ವಿದ್ಯಾರ್ಥಿಗಳು ಶಾಲಾ ಕಾಲೇಜಿನಲ್ಲಿನ ತರಗತಿ ಬೋಧನೆಯನ್ನು ಮಾತ್ರ ನೆಚ್ಚಿಕೊಂಡಿರುತ್ತಾರೆ. ಉತ್ತಮ ಮಾರ್ಗದರ್ಶಿ ಗೈಡ್ ಇಲ್ಲವೇ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ವಸ್ತುವನ್ನು ಖರೀದಿಸಲು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಬಡತನದಿಂದ ಶಾಸಕರು ಸ್ವಯಂ ಅನುಭವಿಸಿದ್ದಾರೆ. ಇದನ್ನರಿತುಕೊಂಡು ಮಕ್ಕಳಿಗೆ ತಲಾ 1 ಸಾವಿರ ರೂ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ.
ಪ್ರದೀಪ್ ಈಶ್ವರ್ ಅಯ್ಯರ್, ಶಾಸಕ, ಚಿಕ್ಕಬಳ್ಳಾಪುರ