ಕೆ.ಆರ್.ಪೇಟೆ: ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಏ.6ರಂದು ಮಧ್ಯಾಹ್ನ 2.30ಕ್ಕೆ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಮುಖಂಡರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರದ ಜನಪರ ಕೆಲಸಗಳನ್ನು ಕಾರ್ಯಕರ್ತರು ತಳಮಟ್ಟದಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪರಿಶ್ರಮದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರ ಕುಂದುಕೊರತೆಗಳನ್ನು ಸಭೆಯಲ್ಲಿ ಆಲಿಸಲಾಗುವುದು. ತಾಲೂಕಿನ ಜ್ವಲಂತ ಸಮಸ್ಯೆಗಳು ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಕರ್ತರು ಸರ್ಕಾರದ ಬಳಿಗೆ ಹೋಗುವ ಬದಲು ಸರ್ಕಾರವೇ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಬಳಿಗೆ ಬರುತ್ತಿದೆ ಎಂದರು.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜಯ್ಯ, ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಸಲ್ಲು, ಮುಖಂಡರಾದ ಮಡುವಿನಕೋಡಿ ಕಾಂತರಾಜು, ಅಕ್ಕಿಹೆಬ್ಬಾಳು ಅಣ್ಣಯ್ಯ, ಇಲ್ಯಾಸ್ ಅಹಮದ್, ಜಮೀರ್, ಹಾಫಿಜುಲ್ಲಾ, ಪುರಸಭೆ ನಾಮನಿರ್ದೇಶಿತ ಸದಸ್ಯ ಅಜ್ಮತ್ ಉಲ್ಲಾ ಷರೀಫ್ ಇದ್ದರು.