ಜಿಲ್ಲೆ

ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಪೂರ್ವಭಾವಿ ಸಭೆ : 21ರಂದು ಕಾಸರಗೋಡಿನಲ್ಲಿ ಚಾಲನೆ

ಸೌಮ್ಯ ಆರ್

ಕಾಸರಗೋಡು: ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮ ಭಾಗವಾಗಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

ಪಿಲಿಕೋಡ್ ಪಂಚಾಯಿತಿಯ ಕಾಲಿಕಡವ್‌ನಲ್ಲಿ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಆಯೋಜಿಸಲಿರುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವಾರ್ಷಿಕ ಆಚರಣೆಯನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಈ ಚಟುವಟಿಕೆಗಳಲ್ಲಿ ಎಲ್ಲ ಸಿಬ್ಬಂದಿ ಭಾಗವಹಿಸಬೇಕು. ವಿವಿಧ ಇಲಾಖೆಗಳು ಸಿದ್ಧಪಡಿಸುವ ಮಳಿಗೆಗಳು, ವಿಭಾಗಗಳ ಕುರಿತಾದ ವಿವರವಾದ ದಾಖಲೆಗಳನ್ನು ಪ್ರಸ್ತುತಪಡಿಸಬೇಕು. ಅದಕ್ಕಾಗಿ ಅತ್ಯುತ್ತಮ ತಂಡದ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿವೆ. ಸ್ಥಳೀಯಾಡಳಿತ ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲ ಜಿಲ್ಲೆಗಳ ಕಾರ್ಯಕ್ರಮದಲ್ಲೂ ಮುಖ್ಯಮಂತ್ರಿ ಭಾಗವಹಿಸಲಿದ್ದು, ಮುಖ್ಯಮಂತ್ರಿಯವರ ಕಾರ್ಯಕ್ರಮಗಳು ಏಪ್ರಿಲ್ 21ರಂದು ಕಾಸರಗೋಡಿನಿಂದ ಪ್ರಾರಂಭಿಸಿ ಮೇ 21ರಂದು ತಿರುವನಂತಪುರದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ವಿವಿಧ ಸವಲತ್ತು ಪಡೆದ ಫಲಾನುಭವಿಗಳ ಹಾಗೂ ಪ್ರಮುಖ ವ್ಯಕ್ತಿಗಳ ಸಭೆಯನ್ನು ಆಯೋಜಿಸಲಾಗುವುದು. ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳು, ಸಾಧನೆಗಳನ್ನು ಪ್ರದರ್ಶಿಸುವ ಜಿಲ್ಲಾಮಟ್ಟದ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವು ಒಂದು ವಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.