ಮುಧೋಳ ರನ್ನ ವೃತ್ತ ನವೀಕೃತ ಕಾಮಗಾರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಪಂ ಸಿಇಒ ಶಶಿಧರ ಕುರೆರ, ಉದಯ ಸಾರವಾಡ, ರಾಜುಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ರನ್ನ ವೃತ್ತ ನವೀಕರಣ ಸರ್ಕಾರದ ಬದ್ಧತೆ

ಮುಧೋಳ: ಹಲವಾರು ವರ್ಷಗಳ ಬೇಡಿಕೆ ರನ್ನ ವೃತ್ತವನ್ನು ನವೀಕೃತಗೊಳಿಸುವ ಕಾರ್ಯಕ್ಕೆ ಸರ್ಕಾರ ಬದ್ಧತೆ ತೋರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದಲ್ಲಿ ಶನಿವಾರ ರನ್ನ ವೃತ್ತದಲ್ಲಿ ನವೀಕೃತ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರನ್ನ ವೈಭವ ಬಸ್‌ಗಳಿಗೂ ಚಾಲನೆ ನೀಡಲಾಗಿದೆ. ಅವು ಜಿಲ್ಲೆಯಲ್ಲಿ ಓಡಾಡುತ್ತವೆ ಎಂದು ಹೇಳಿದರು.

ರನ್ನ ವೈಭವ-2025ರ ಅಂಗವಾಗಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವ ಕಲಾವಿದರು, ಕ್ರೀಡಾಪಟುಗಳು, ಸಾಹಿತಿಗಳು, ಕವಿಗಳು, ವಿದ್ವಾಂಸರು, ಮಾಧ್ಯಮದವರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅದ್ದೂರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಭೋಜನ ವ್ಯವಸ್ಥೆ

ಮುಧೋಳದಲ್ಲಿ ಬಂಡಿಗಣಿ ಬಸವಗೋಪಾಲ ಅನ್ನದಾನೇಶ್ವರ ಬಂಡಿಗಣಿ ಮಠ ಸ್ವಾಮೀಜಿ ಅವರಿಂದ ಫೆ.23 ಮತ್ತು 24ರಂದು ಬೆಳಗ್ಗೆ ಶಿರಾ, ಒಗ್ಗರಣೆ ಅನ್ನ ಮತ್ತು ಚಹಾ, ಮಧ್ಯಾಹ್ನ ಹಾಲುಗ್ಗಿ, ಬುಂದೆ, ಉಪ್ಪಿನಕಾಯಿ, ಅನ್ನಸಾಂಬಾರ, ರಾತ್ರಿ ಹಾಲುಗ್ಗಿ, ಬುಂದೆ, ಉಪ್ಪಿನಕಾಯಿ, ಅನ್ನಸಾಂಬಾರ ವ್ಯವಸ್ಥೆ ಇರುತ್ತದೆ. 40 ಕೌಂಟರ್‌ಗಳಲ್ಲಿ ಮಹಿಳೆಯರಿಗೆ 20 ಹಾಗೂ ವಿಕಲಚೇತನರಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ. ಊಟೋಪಚಾರದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೆರ, ಕಾಂಗ್ರೆಸ್ ಮುಖಂಡರಾದ ಉದಯ ಸಾರವಾಡ, ರಾಜುಗೌಡ ಪಾಟೀಲ ಉಪಸ್ಥಿತರಿದ್ದರು.