ಜಿಲ್ಲೆ

ಮಲೆನಾಡಿಗರನ್ನು ಒಕ್ಕಲೆಬ್ಬಿಸಲು ಸರ್ಕಾರದ ಪ್ರಯತ್ನ

ಜಯಪುರ: ಜನವಿರೋಧಿ ಅರಣ್ಯ ಕಾಯ್ದೆಗಳ ಪರಿಣಾಮ ಮಲೆನಾಡಿನ ಜನ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ಪರಿಹರಿಸ ಬೇಕಾದ ಜನಪ್ರತಿನಿಧಿಗಳು ಸುಪ್ರಿಂ ಕೋರ್ಟ್ ನೆಪ ಮುಂದಿಟ್ಟು ರೈತ ಮತ್ತು ಕಾರ್ಮಿಕರ ಜೀವನದ ಜತೆ ಚೆಲ್ಲಾಟವಾಡುತ್ತಿವೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅತ್ತಿಕುಳಿ ಸುಂದರೇಶ್ ಹೇಳಿದರು.

ಜಯಪುರದಲ್ಲಿ ನಡೆದ ಮೇಗುಂದಾ ಹೋಬಳಿ ವ್ಯಾಪ್ತಿಯ ರೈತ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡನ್ನು ಕಸ್ತೂರಿ ರಂಗನ್ ವರದಿ, ಸೆಕ್ಷನ್ 4,ಹುಲಿ ಯೋಜನೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದನ್ನು ತಡೆಯಲು ನಾವು ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.

ಕಲ್ಲುಗುಡ್ಡೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣ ಬೆಂಡೆಹಕ್ಲು ಮಾತನಾಡಿ, ಜನವಿರೋಧಿ ಅರಣ್ಯ ಕಾಯ್ದೆಗಳ ವಿರುದ್ಧ ನಾಗರಿಕ ಹಿತರಕ್ಷಣಾ ಸಮಿತಿ ಆ.30 ಕೊಪ್ಪದ ಟೌನ್‌ಹಾಲ್‌ನಲ್ಲಿ ಕ್ಷೇತ್ರದ ಪ್ರಮುಖ ರೈತ ಮತ್ತು ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಲಾಗುವುದು. ಕ್ಷೇತ್ರದ ಎಲ್ಲ ರೈತ ಹಾಗೂ ಕಾರ್ಮಿಕ ಪರ ಸಂಘಟನೆಗಳ ಪದಾಧಿಖಾರಿಗಳು ಸಭೆಗೆ ಬಂದು ಮುಂದೆ ನೆಡೆಯುವ ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದರು.

ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಕೊಪ್ಪ ತಾಲೂಕು ಅಧ್ಯಕ್ಷ ಕುಕ್ಕುಡಿಗೆ ರವಿಂದ್ರ ಮಾತನಾಡಿ, ಅರಣ್ಯ ಕಾಯ್ದೆಗಳು ಮಲೆನಾಡಿಗೆ ಮಾರಕವಾಗಿದ್ದು, ಈ ಸಮಸ್ಯೆ ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ವಿಶೇಷ ಆಸಕ್ತಿ ವಹಿಸಬೇಕು. ಕ್ಷೇತ್ರದ ಜನ ಪಕ್ಷ ಬೇಧ ಮರೆತು ಹೋರಾಟದಲ್ಲಿ ಭಾಗವಹಿಸಬೇಕು ಎಂದರು.