ಜಿಲ್ಲೆ

ಸರ್ಕಾರಿ ಕೆಲಸ ಎಂದು ಸುಳ್ಳು ಹೇಳಿ ಮದುವೆ; 10 ಜನರ ವಿರುದ್ಧ ಪ್ರಕರಣ ದಾಖಲು

Haveri - Kariyappa Aralikatti

ಹಾವೇರಿ: ಹೆಸ್ಕಾಂನಲ್ಲಿ ಸರ್ಕಾರಿ ಕೆಲಸಯಿದೆ ಎಂದು ಸುಳ್ಳು ಹೇಳಿ ಮದುವೆ ಮಾಡಿಸಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ ಆರೋಪದಡಿ ಪತಿ ಹಾಗೂ ಮದುವೆ ಮಾಡಿಸಿದ ಮಹಿಳೆ ಸೇರಿ 10 ಜನರ ವಿರುದ್ಧ ಮೋಸ ಹೋದ ಯುವತಿ ಇಲ್ಲಿಯ ಮಹಿಳಾ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ಕುಳೇನೂರ ಗ್ರಾಮದ ಯುವತಿಯ ಪತಿ ಮೃತ್ಯುಂಜಯ ಮಾಲತೇಶಪ್ಪ ನೆಲ್ಲೂರ ಹಾಗೂ ಮದುವೆ ಮಾಡಿಸಿದ ಗೌರಮ್ಮ ಶಿವಾನಂದಪ್ಪ ಮತ್ತಿಹಳ್ಳಿ ಎಂಬುವರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರ ವಿರುದ್ಧ ಮೋಸ ಹೋಗಿರುವ ಯುವತಿ ದೂರು ದಾಖಲಿಸಿದ್ದಾರೆ. ಆರೋಪಿ ಗೌರಮ್ಮ ಮೃತ್ಯುಂಜಯನಿಗೆ ಹೆಸ್ಕಾಂನಲ್ಲಿ ಸರ್ಕಾರಿ ಕೆಲಸವಿದೆ ಎಂದು ಸುಳ್ಳು ಹೇಳಿ 2 ತೊಲೆ ಚಿನ್ನಾಭರಣ, 25 ಸಾವಿರ ರೂ. ವರದಕ್ಷಿಣೆ ಕೊಡಿಸಿ 2024 ಫೆಬ್ರವರಿ 18ರಂದು ಮದುವೆ ಮಾಡಿಸಿದ್ದಳು. ಆದರೆ, ಮೃತ್ಯುಂಜಯನ ಮನೆಗೆ ಹೋದ ಮೇಲೆ ಆತನಿಗೆ ಸರ್ಕಾರಿ ಕೆಲಸ ಇಲ್ಲ ಎಂಬುದು ಗೊತ್ತಾಗಿದೆ. ಇದನ್ನು ಕೇಳಿದರೆ ಆತನ ಕುಟುಂಬದವರು ಇನ್ನೂ 2 ಲಕ್ಷ ರೂ. ತೆಗೆದುಕೊಂಡು ಆತನಿಗೆ ಯಾವುದಾದರೂ ವ್ಯಾಪಾರಕ್ಕೆ ಹಚ್ಚುತ್ತೇವೆ ಎಂದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಅಲ್ಲದೆ ಇದನ್ನು ಕೇಳಲು ಗೌರಮ್ಮ ಹತ್ತಿರ ಹೋದಾಗ ನಿಮ್ಮ ಜಾತಿಯಲ್ಲಿ ವರ ಸಿಗೋದೆ ಕಷ್ಟ ಎಂದು ಜಾತಿ ಹಿಡಿದು ಬೈದು ಕಳುಹಿಸಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.