ಬಸಿಡೋಣಿಯ ಯೋಧ ಮಂಜುನಾಥ ತಳವಾರ ಅವರ ಪಾರ್ಥಿವ ಶರೀರಕ್ಕೆ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. 
ಜಿಲ್ಲೆ

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಮುನವಳ್ಳಿ: ಜಮ್ಮು-ಕಾಶ್ಮೀರದಲ್ಲಿ ಈಚೆಗೆ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಯೋಧ ಮಂಜುನಾಥ ತಳವಾರ ಅವರ ಪಾರ್ಥಿವ ಶರೀರ ಜು. 2 ರಂದು ರಾತ್ರಿ ಸ್ವಗ್ರಾಮ ಸವದತ್ತಿಗೆ ತರಲಾಯಿತು. ಅಲ್ಲಿಂದ ತಾಲೂಕಿನ ಬಸಿಡೋಣಿಗೆ ತಂದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರಲ್ಲಿ ಸೂತಕ ಮನೆಮಾಡಿತ್ತು.

ಅಂತ್ಯ ಸಂಸ್ಕಾರದಲ್ಲಿ ಸುತ್ತಮುತ್ತಲಿನ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು. ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಅಂತಿಮ ನಮನ ಸಲ್ಲಿಸಿ, ಯೋಧನ ಮರಣದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಕಂಬನಿ ಮಿಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಯೋಧನ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.