ಜಿಲ್ಲೆ

ಮಾವು ಬೆಲೆ ಕುಸಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ

ಕೋಲಾರ ಡೆಸ್ಕ್

ಮುಳಬಾಗಿಲು: ಮಾವು, ಟೊಮ್ಯಾಟೊ ಬೆಲೆ ಕುಸಿತದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ರೈತ ಸಂಘದಿಂದ ಪ್ರತಿಭಟಿಸಿ, ತಹಸೀಲ್ದಾರ್​ ವಿ.ಗೀತಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರ ಮಾವು, ಟೊಮ್ಯಾಟೊ ಬೆಲೆ ಕುಸಿತದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದರೆ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳು, ರೈತರು, ವ್ಯಾಪಾರಸ್ಥರು, ಮಂಡಿ ಮಾಲೀಕರು ಒಗ್ಗಟ್ಟಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ, ರಾಜ್ಯ, ಗ್ರಾಮೀಣ ರಸ್ತೆಗಳನ್ನು ಟ್ರಾಕ್ಟರ್​ಗಳು ಜಾನುವಾರುಗಳ ಸಮೇತ ಬಂದ್​ಗೆ ಕರೆ ನೀಡಿದರೆ ಮಾತ್ರ ಬೆಲೆ ಕುಸಿತದ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದರು.

ಮಾವು ಬೆಲೆ ಕುಸಿತದಿಂದ ಕಂಗಾಲಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಮಾವಿನ ವ್ಯಾಪಾರಿ ಮೊಹಮದ್​ ಷಫಿವುಲ್ಲಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ವಿತರಿಸಿ, ಮಾವು, ಟೊಮ್ಯಾಟೊ ಬೆಲೆ ಕುಸಿತದಿಂದ ಹತಾಷರಾಗಿರುವ ರೈತರ ರಕ್ಷಣೆಗೆ ಕೂಡಲೇ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಕೋಟ್ಯಾಂತರ ಮಾವಿನ ತೋಟಗಳ ಮೇಲೆ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿದ್ದ ಮಾವಿನ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ದಿಢೀರ್​ ಬೆಲೆ ಕುಸಿತದಿಂದ ಹತಾಷರಾಗುವ ಜತೆಗೆ ರೈತರಿಗೆ ಹಾಗೂ ಔಷಧ ಅಂಗಡಿಗಳಲ್ಲಿ ಮಾಡಿದ ಸಾಲ ತೀರಿಸಲಾಗದೆ ಬಡ್ಡಿ ಕಟ್ಟಲಾಗದೆ ಮಾನಸಿಕವಾಗಿ ಆತ್ಮಸ್ಥೈರ್ಯ ಕಳೆದುಕೊಳ್ಳುವ ವ್ಯಾಪಾರಸ್ಥರಿಗೆ ತನ್ನ ಸ್ವಾಭಿಮಾನದ ಗೌರವದ ಜೀವನಕ್ಕೆ ಎಲ್ಲಿ ದಕ್ಕೆ ಬರುತ್ತದೆ ಎಂದು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಇಂದು ವ್ಯಾಪಾರಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್​, ಮುಖಂಡರಾದ ಜುಬೇರ್​ಪಾಷಾ, ಅಂಬ್ಲಿಕಲ್​ ಮಂಜುನಾಥ್​, ಮಂಗಸಂದ್ರ ತಿಮ್ಮಣ್ಣ, ರಾಜು, ಗಿರೀಶ್​, ಚಂದ್ರಪ್ಪ, ವಕ್ಕಲೇರಿ ಹನುಮಯ್ಯ ಇದ್ದರು.