ಜಿಲ್ಲೆ

ದತ್ತಪೀಠ ಮುಕ್ತಿಗೆ ಸಹಿ ಸಂಗ್ರಹ ಅಭಿಯಾನ

ಚಿಕ್ಕಮಗಳೂರು: ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದತ್ತಾತ್ರೇಯ ಪೀಠದ ಮುಕ್ತಿಗೆ ಒತ್ತಾಯಿಸಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಯಿತು. ನಗರದ ಆಜಾದ್​ಪಾರ್ಕ್ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಹಿರಿಯ ಹೋರಾಟಗಾರ ನರಸಿಂಹಮೂರ್ತಿ ಚಾಲನೆ ನೀಡಿದರು.

ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ದತ್ತಪೀಠ ಮುಕ್ತಿಗಾಗಿ ಸಾಕಷ್ಟು ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಸರ್ಕಾರಗಳಿಗೆ ಭಕ್ತರ ನೋವು, ಆಕ್ರೋಶ ಅರ್ಥವಾಗುತ್ತಿಲ್ಲ. ಹಾಗಾಗಿ ಸಮಾಜದ ನಡುವೆ ಈ ವಿಷಯ ವ್ಯಾಪಕವಾಗಿ ಕೊಂಡೊಯ್ಯಲು ಹಲವು ಹೋರಾಟ ರೂಪಿಸಿ ರಾಜ್ಯದಲ್ಲಿ ಸಹಿಸಂಗ್ರಹ ಮಾಡಿ ಸಿಎಂಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೂಚನೆಯಂತೆ ರಾಜ್ಯಾದ್ಯಂತ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದತ್ತ ಭಕ್ತರಾದಿಯಾಗಿ ಸಹಸ್ರ ಸಂಖ್ಯೆಯಲ್ಲಿ ಜನ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದು ಇದನ್ನು ಮುಖ್ಯಮಂತ್ರಿಗೆ ಕಳುಹಿಸುವ ಮೂಲಕ ದತ್ತಪೀಠ ಮುಕ್ತಿಗೆ ಒತ್ತಡ ಹಾಕುವ ಕಾರ್ಯ ಮಾಡಲಾಗುತ್ತಿದೆ. ದತ್ತಪೀಠದಲ್ಲಿ ಇಸ್ಲಾಮೀಕರಣವಾಗಿರುವ ಸ್ಥಳಗಳನ್ನು ಜನ್ನತ್ ನಗರಕ್ಕೆ ಸ್ಥಳಾಂತರಿಸಿ ಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಖಾಂಡ್ಯ ಪ್ರವೀಣ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಅಯೋಧ್ಯೆ ರಾಮಮಂದಿರವನ್ನು ಹಿಂದು ಸಮಾಜಕ್ಕೆ ಅರ್ಪಿಸಿರುವ ರೀತಿಯಲ್ಲಿ ದತ್ತಪೀಠವನ್ನು ಒಪ್ಪಿಸಬೇಕು. ಈ ಮೂಲಕ ಗುಹಾಂತರ ದೇವಾಲಯದಲ್ಲಿ ಪೂರ್ಣ ಪ್ರಮಾಣದ ಹಿಂದು ಪದ್ಧತಿ ಅನುಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ವಿಎಚ್​ಪಿ, ಬಜರಂಗದಳ ಹಿಂದುಗಳ ಎಲ್ಲ ಹೋರಾಟಕ್ಕೂ ಬೆಂಬಲವಿದೆ ಎಂದರು.