ಬೆಂಗಳೂರು: ಹೆಚ್ಚು ಪುಸ್ತಕವನ್ನು ಖರೀದಿಸುವ ಮೂಲಕ ಪ್ರಕಾಶಕರನ್ನು, ಸಾಹಿತಿಗಳನ್ನು ಬೆಂಬಲಿಸಬೇಕು ಎಂದು ಸರ್ಕಾರಕ್ಕೆ ಹಿರಿಯ ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಒತ್ತಾಯಿಸಿದ್ದಾರೆ.
ಉಪಾಸನ ಬುಕ್ಸ್ ಪ್ರಕಾಶನ, ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 15 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬರಬೇಕು. ಯುವ ಜನಾಂಗ ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯ ಕ್ಷೇತ್ರ ಉಳಿಯಲಿದೆ ಎಂದರು.
ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವ ಪ್ರಕಾಶನದ ಕಾರ್ಯ ಸ್ವಾಗತಾರ್ಹ. ಈ ಕೃತಿಗಳು ಭಿನ್ನವಾಗಿ, ಆಸಕ್ತಿದಾಯಕವಾಗಿವೆ ಎಂದು ಲೇಖಕಿ ಮೇಘನಾ ಸುಧೀಂದ್ರ ಹೇಳಿದರು.
ಟಿ.ಎನ್. ಉಷಾ ರಾಣಿ, ಎಲ್. ಗಿರಿಜಾರಾಜ್, ಎನ್. ಶಂಕರರಾವ್, ಸಿಂಧು ಹರಿತಸ್, ಗಾಯತ್ರಿ ಮೂರ್ತಿ, ಎಚ್.ವಿ. ಶ್ರೀಪ್ರಕಾಶ್, ಎನ್.ವಿ. ರಘುರಾಂ ರಚಿಸಿರುವ ‘ಖೋ ಕಾದಂದರಿ ಅದೃಶ್ಯ ಬೇರುಗಳು’, ಡಾ. ಪ್ರದೀಪ್ ಬೇಲೂರು ಅವರ ಕಥಾ ಸಂಕಲನ ‘ಸುಡೋಕು’, ಹರೀಶ್ ಬರೆದಿರುವ ‘ಅಮ್ಮ ಅಂದ್ರೆ ಭೂಮಿ’ ಕಥಾ ಸಂಕಲನ ಮತ್ತು ಆಶಾ ರಘು ಅವರ ‘ಹೂಮಾಲೆಯಾದ ಆಂಡಾಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಂದಲಗೆರೆ ಗಿರೀಶ್ ಅವರ ಮರು ಮುದ್ರಣದ ಕವನ ಸಂಕಲನ ಲೋಕಾರ್ಪಣೆಯಾಯಿತು. ಪ್ರಕಾಶಕಿ ಆಶಾ ರಘು, ಲೇಖಕಿ ಎಚ್. ನಿವೇದಿತಾ ಮತ್ತಿತರರಿದ್ದರು.