ವಿಜಯವಾಣಿ ಸುದ್ದಿಜಾಲ ಕಡಬ
ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬಾಳು ಬೆಳಗಿದ ಕಡಬ ತಾಲೂಕಿನ ಎರಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೂನ್ಯ ದಾಖಲತಿಯಿಂದಾಗಿ ಬಾಗಿಲು ಮುಚ್ಚಿವೆ.
ರೆಂಜಿಲಾಡಿ ಗ್ರಾಮದ ಮೀನಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಬಿಳಿನೆಲೆ ಗ್ರಾಮದ ಚೇರು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆ ಎದುರಾಗಿ ಶೈಕ್ಷಣಿಕ ಚಟುಟವಟಿಕೆ ಸ್ಥಬ್ಧವಾಗಿದೆ. ಸುವರ್ಣ ಮಹೋತ್ಸವ ಆಚರಿಸಿಕೊಂಡ ಮೀನಾಡಿ ಸರ್ಕಾರಿ ಕಿ.ಪ್ರಾ.ಶಾಲೆಯಲ್ಲಿ ಕಳೆದ ವರ್ಷ ನಾಲ್ವರು ವಿದ್ಯಾರ್ಥಿಗಳಿದ್ದರು. 5ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು 6ನೇ ತರಗತಿಗೆ ಬೇರೆ ಶಾಲೆಗೆ ಸೇರ್ಪಡೆಗೊಂಡು ತೆರಳಿದ್ದಾರೆ. ಇಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು 5ನೇ ತರಗತಿಯಲ್ಲಿನ ವಿದ್ಯಾರ್ಥಿಗಳ ತಂಗಿ- ತಮ್ಮಂದಿರಾಗಿದ್ದು, ಅವರು ಅವರ ಜತೆಗೆ ಬೇರೆ ಶಾಲೆಗೆ ತೆರಳಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಶಾಲೆ ಬಾಗಿಲು ಮುಚ್ಚಲೇಬೇಕಾಯಿತು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನೂ ಬೇರೆ ಶಾಲೆಗೆ ನಿಯೋಜಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಈ ಶಾಲೆಗೆ ರೈಲು ಬೋಗಿಗಳ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಲು ‘ಮೀನಾಡಿ ಎಕ್ಸ್‌ಪ್ರೆಸ್’ ಎಂದು ಹೆಸರು ನೀಡಿ ಶಾಲಾ ಶಿಕ್ಷಕರು, ಎಸ್‌ಡಿಎಂಸಿಯವರು ಮತ್ತಿತರರು ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನ ಮಾಡಿದ್ದರೂ ಫಲ ನೀಡದಂತಾಗಿದೆ.
ಬಿಳಿನೆಲೆ ಗ್ರಾಮದ ಚೇರು ಕಿ.ಪ್ರಾ.ಶಾಲೆಯಲ್ಲಿ ಕಳೆದ ವರ್ಷ 5ನೇ ತರಗತಿಯಲ್ಲಿ ಇಬ್ಬರು, 3 ಹಾಗೂ 4ನೇ ತರಗತಿಯಲ್ಲಿ ತಲಾ ಒಬ್ಬರು ವ್ಯಾಸಂಗ ಮಾಡಿದ್ದರು. 5ನೇ ತರಗತಿಯಲ್ಲಿದ್ದ ಇಬ್ಬರು 6ನೇ ತರಗತಿಗಾಗಿ ಬೇರೆ ಶಾಲೆಗೆ ತೆರಳಿದ್ದು, ಈ ವರ್ಷ ಬೇರೆ ಯಾವುದೇ ಮಕ್ಕಳು ಸೇರ್ಪಡೆ ಆಗದ ಹಿನ್ನೆಲೆಯಲ್ಲಿ ಇದ್ದ ಇಬ್ಬರು ಮಕ್ಕಳನ್ನು ಅವರ ಪಾಲಕರು ಬೇರೆ ಶಾಲೆಗೆ ಸೇರ್ಪಡೆ ಮಾಡಿದ್ದರಿಂದ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ. ಇಲ್ಲಿನ ಶಾಲೆ ಕಳೆದ ವರ್ಷವೇ ಮುಚ್ಚುವ ಹಂತಕ್ಕೆ ತಲುಪಿತ್ತು. ಶಾಲೆಯನ್ನು ಉಳಿಸುವ ಪ್ರಯತ್ನದಿಂದಾಗಿ ಮಕ್ಕಳನ್ನು ಸೇರಿಸಿ ಕಳೆದ ವರ್ಷ ಶಾಲೆಯನ್ನು ನಡೆಸಲಾಗಿತ್ತು. ಈ ಶಾಲೆಯನ್ನು ಉಳಿಸಲು ಸಂಘ- ಸಂಸ್ಥೆಗಳು ಪ್ರಯತ್ನಪಟ್ಟಿದ್ದರೂ ಅದು ಫಲ ನೀಡಿಲ್ಲ.
ಸೊತ್ತುಗಳನ್ನು ರಕ್ಷಿಸಲಿ
ಸರ್ಕಾರಿ ಶಾಲೆಗಳನ್ನು ಊರಿನ ಹಿರಿಯರು ಕಟ್ಟಿ ಬೆಳೆಸಲು ಅದೆಷ್ಟೋ ಕಷ್ಟಪಟ್ಟಿದ್ದಾರೆ. ಆದರೆ ಇಂದು ವಿವಿಧ ಕಾರಣಗಳಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಪರ‌್ಯಾಸ ಎನ್ನುವುದು ಶಿಕ್ಷಣ ಪ್ರೇಮಿಗಳ ಬೇಸರ. ಈ ನಡುವೆ ಮುಚ್ಚಿರುವ ಶಾಲೆಗಳ ಆಸ್ತಿ, ಸೊತ್ತುಗಳನ್ನು ರಕ್ಷಿಸಲು ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಡಬ ತಾಲೂಕಿನ ಮೀನಾಡಿ ಕಿ.ಪ್ರಾ.ಶಾಲೆ ಹಾಗೂ ಚೇರು ಕಿ.ಪ್ರಾ.ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆಯಿಂದ ತಾತ್ಕಲಿಕವಾಗಿ ಮುಚ್ಚಲಾಗಿದೆ. ಮುಚ್ಚಿದ ಶಾಲೆಗಳಿಗೆ ಮುಂದಿನ ವರ್ಷ ಅಥವಾ ಈ ವರ್ಷವೇ ಮಕ್ಕಳು ಸೇರ್ಪಡೆಗೊಂಡಲ್ಲಿ ಮತ್ತೆ ಮುಚ್ಚಿದ ಶಾಲೆಗಳನ್ನು ತೆರೆದು ಶಾಲೆಯಲ್ಲಿ ತರಗತಿ ನಡೆಸಲು ಅವಕಾಶವಿದೆ. ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು