ಕಲಾದಗಿ: ಸೋರುತ್ತಿರುವ ಕಟ್ಟಡಗಳು, ಅಸ್ತಿ ಪಂಜರದಂತೆ ಕಾಣುತ್ತಿರುವ ಮೇಲ್ಛಾವಣಿಗಳು, ಕೆಳಗಡೆ ಜೀವ ಭಯದಲ್ಲೇ ಕುಳಿತು ಪಾಠ ಆಲಿಸುತ್ತಿರುವ ಮಕ್ಕಳು, ಹೆದರಿಕೆಯಿಂದಲೇ ಪಾಠ ಹೇಳುವ ಶಿಕ್ಷಕರು....
ಇದು ಈ ಭಾಗದ ಸರ್ಕಾರಿ ಶಾಲೆಗಳಲ್ಲಿನ ಸದ್ಯದ ದುಸ್ಥಿತಿಯ ಚಿತ್ರಣ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂಬುದು ವಾಸ್ತವ ಸತ್ಯವಾಗಿದ್ದು, ಈ ಮಾತಿಗೆ ಈ ಭಾಗದ ಸರ್ಕಾರಿ ಶಾಲೆಗಳು ಹೊರತಲ್ಲ.
ಕಲಾದಗಿ ಹೋಬಳಿಯಲ್ಲಿನ ಹಲವಾರು ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡಗಳು ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ಅನೇಕ ಕಟ್ಟಡಗಳು ಸಣ್ಣಪುಟ್ಟ ದುರಸ್ತಿ ನಿರೀಕ್ಷಿಸುತ್ತಿದ್ದರೆ, ಇನ್ನಷ್ಟು ಕಟ್ಟಡಗಳ ಸ್ಥಿತಿ ಮಳೆಗಾಲದಲ್ಲಿ ಭಯಾನಕವಾಗಿ ಕಂಡು ಬರುತ್ತಿವೆ.
ಗ್ರಾಮದಲ್ಲಿರುವ ಶತಮಾನದ ಇತಿಹಾಸವಿರುವ ಸರ್ಕಾರಿ ಉರ್ದು ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಉರ್ದು ಹೆಣ್ಣು ಮಕ್ಕಳ ಶಾಲೆ, ಸಮೀಪದ ಅಂಕಲಗಿ, ಉದಗಟ್ಟಿ, ದೇವನಾಳ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ತುಳಸಿಗೇರೆ ಎಚ್‌ಯುಪಿ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ಬಹುತೇಕ ಕೊಠಡಿಗಳ ಸ್ಥಿತಿಯಂತೂ ಅಯೋಮವಾಗಿದೆ. ಅಲ್ಲದೆ, ಅಂಕಲಗಿ, ಉದಗಟ್ಟಿ ಶಾಲೆಗಳ ಬಹುತೇಕ ಕೊಠಡಿಗಳ ಸ್ಥಿತಿ ಗಂಭೀರವಾಗಿದೆ. ಸುರಕ್ಷಿತ ಜಾಗದಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಹೇಳಲು ಶಿಕ್ಷಕರು ಹೈರಾಣಾಗುತ್ತಿದ್ದಾರೆ.
ವರದಿ ಕಳಿಸೋದಷ್ಟೆ ನಿಜ: ಶಿಕ್ಷಣ ಇಲಾಖೆ ಶಾಲೆಗಳ ಕಟ್ಟಡಗಳ ಸುಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ವರದಿ ತರಿಸಿಕೊಳ್ಳುವುದಷ್ಟೇ ನಿಜ. ಆದರೆ ದುಸ್ಥಿತಿಯಲ್ಲಿರುವ ಕಟ್ಟಡಗಳ ದುರಸ್ತಿಗೆ ಮುಂದಾಗುವುದು, ಅಂಥ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವುದು ಕಡಿಮೆ. ಒಂದು ವೇಳೆ ಕಟ್ಟಡದ ದುರಸ್ತಿಗೆ ಹಣ ಮಂಜೂರು ಮಾಡಿದರೂ ಅದು ಸಾಕಾಗುವಷ್ಟು ಇರುವುದಿಲ್ಲ ಎಂಬುದು ಶಾಲೆಗಳ ಎಸಿಡಿಎಂಸಿ ಅಧ್ಯಕ್ಷರ, ಸದಸ್ಯರ ಆರೋಪ.
ಜೀವ ಭಯದಲ್ಲಿ ಮಕ್ಕಳು, ಶಿಕ್ಷಕರು ಶಾಲೆಗೆ ಬರಬೇಕಾಗಿದೆ. ಶಾಲೆಯ ಬಹುತೇಕ ಕೊಠಡಿಗಳ ಮೇಲ್ಛಾವಣಿಗಳು ಬೀಳುವ ಸ್ಥಿತಿಯಲ್ಲಿವೆ. ಸೋರುತ್ತಿವೆ. ಕೊಠಡಿಗಳ ದುರಸ್ತಿ ಬಗ್ಗೆ ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದವರು ಮನಸ್ಸು ಮಾಡಬೇಕಿದೆ. ಗೌಡಪ್ಪ ಬಳೂಲದ, ಎಸ್‌ಡಿಎಎಂಸಿ ಅಧ್ಯಕ್ಷ. ಸರ್ಕಾರಿ ಪ್ರಾಥಮಿಕ ಶಾಲೆ ಅಂಕಲಗಿ