ಬೆಂಗಳೂರು: ಪನಾಮದಲ್ಲಿ ನಡೆಯುವ ಪ್ರತಿಷ್ಠಿತ ಸ್ಟ್ ಗ್ಲೋಬಲ್ ಚಾಲೆಂಜ್ ರೋಬೋಟಿಕ್ಸ್ ಒಲಂಪಿಕ್ಸ್ 2025ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಮಲ್ಲೇಶ್ವರ ಸರ್ಕಾರಿ ಪೌಢಶಾಲೆ ವಿದ್ಯಾರ್ಥಿಗಳನ್ನು ರೇವಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು. ಎಸ್‌ಟಿಇಎಂ ಎಜುಕೇಷನ್ ಟ್ರಸ್ಟ್ ಮತ್ತು ಇನ್ನೊವೇಷನ್ ಸ್ಟೋರಿ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ರೇವಾ ವಿವಿ ಕುಲಪತಿ ಡಾ.ಪಿ.ಶ್ಯಾಮರಾಜು ವಿದ್ಯಾರ್ಥಿಗಳಾದ ಕೆ.ಅರ್ಜುನ್ ರಾಜ್, ಜಿ. ಎನ್. ಚಂದನ್ ರಾಜ್, ಕೆ. ಗೌರೀಶ್, ನಿಂಗರಾಜ್ ಮತ್ತು ಎಂ.ಪರಶುರಾಮ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳು ತಾವು ಅಭಿವೃದ್ಧಿ ಪಡಿಸಿರುವ ರೋಬೋಟನ್ನು ಪ್ರದರ್ಶಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಸಾಧನೆ ಬಗ್ಗೆ ಶ್ಲಾಸಿ ಮಾತನಾಡಿದ ರೇವಾ ವಿವಿ ಕುಲಪತಿ ಡಾ.ಪಿ. ಶ್ಯಾಮ ರಾಜು, ರೇವಾದಲ್ಲಿ ವ್ಯಾಸಂಗ ಮಾಡುವವರಿಗೆ ನಾವೀನ್ಯತೆಯು ದೈನಂದಿನದ ವ್ಯವಹಾರವಾಗಿದೆ. ನಮ್ಮ ಗುರಿ ಪದವಿಗಳನ್ನು ನೀಡುವುದಲ್ಲ, ನಾಳೆಯ ನಾವೀನ್ಯಕಾರರು ಮತ್ತು ಸಂಶೋಧಕರನ್ನು ಸೃಷ್ಟಿಸುವುದು. ಈ ವಿದ್ಯಾರ್ಥಿಗಳು ಸಾಧಿಸಿರುವುದು ಸ್ಫೂರ್ತಿಯ ವಿಷಯವಾಗಿದೆ. ಶಿಕ್ಷಣವು ಕುತೂಹಲವನ್ನು ಹುಟ್ಟುಹಾಕಬೇಕು ಮತ್ತು ಉದ್ಯಮಶೀಲ ಮನಸ್ಥಿತಿಯನ್ನು ಬೆಳೆಸಬೇಕು ಎಂದು ಹೇಳಿದರು. ಇಂಡಿಯಾ ಕೋಷಿಯಂಟ್‌ನ ಜನರಲ್ ಪಾಲುದಾರ ಗಗನ್ ಗೋಯಲ್ ಮಾತನಾಡಿ, ನಾವೀನ್ಯತೆಯ ಸ್ಫೂರ್ತಿ, ತಾಳ್ಮೆ ಮತ್ತು ಪರಿಶ್ರಮದ ಲವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಡಗಿರುವ ಪ್ರತಿಭೆಗಳನ್ನು ಕಂಡುಹಿಡಿಯುವ ಮತ್ತು ಪೋಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ದಿ ಇನ್ನೋವೇಷನ್ ಸ್ಟೋರಿ ಸಂಸ್ಥಾಪಕಿ ಮೀನಲ್ ಮಜುಂದಾರ್ ಮಾತನಾಡಿ, ವಿದ್ಯಾರ್ಥಿಗಳು ಕುತೂಹಲ ಮತ್ತು ಸೃಜನಶೀಲತೆಯೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸಿದರು.
ಅನುಭವಿ ಕಲಿಕೆ ಮೂಲಕ ಅತ್ಯಾಧುನಿಕ, ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲಗಳೊಂದಿಗೆ ಮಕ್ಕಳನ್ನು ಸಜ್ಜುಗೊಳಿಸಲು ಮೀಸಲಾಗಿರುವ ಉತ್ಸಾಹಭರಿತ ಶಿಕ್ಷಕರ ತಂಡ ದಿ ಇನ್ನೋವೇಷನ್ ಸ್ಟೋರಿ.2030ರ ವೇಳೆಗೆ ಹತ್ತು ಲಕ್ಷ ಡಿಜಿಟಲ್ ಸಬಲೀಕೃತ ವಿದ್ಯಾರ್ಥಿಗಳನ್ನು ರೂಪಿಸುವ ಧ್ಯೇಯದೊಂದಿಗೆ ಸಂಸ್ಥೆಯು ಚಟುವಟಿಕೆಗಳನ್ನು ರೂಪಿಸಲಾಗಿದೆ. ಮಕ್ಕಳು ಕಲಿಯಲು ಅನುವು ಮಾಡಿಕೊಡುವುದರೊಂದಿಗೆ ಕುತೂಹಲ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು, ನಾವೀನ್ಯತೆ, ಸಮಗ್ರತೆ, ಶ್ರೇಷ್ಠತೆ, ಸಹಯೋಗ, ಒಳಗೊಳ್ಳುವಿಕೆ, ಪ್ರಭಾವ, ಸುಸ್ಥಿರತೆ ಮತ್ತು ಕೃತಜ್ಞತೆ ಇಂಥ ಪ್ರಮುಖ ಮೌಲ್ಯಗಳಿಂದ ಮಾರ್ಗದರ್ಶನ ನೀಡುವಲ್ಲಿ ‘ದಿ ಇನ್ನೋವೇಷನ್ ಸ್ಟೋರಿ’ ಸಂಸ್ಥೆ ಕೆಲಸ ಮಾಡುತ್ತಿದೆ.