ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಮಾತನಾಡಿದರು. 
ಜಿಲ್ಲೆ

ಸರ್ಕಾರಿ ಶಾಲೆ ಮೇಲ್ಛಾವಣಿ ಶಿಥಿಲ: ಕೆಯ್ಯೂರು ಗ್ರಾಮಸಭೆಯಲ್ಲಿ ಚರ್ಚೆ

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮದ ಕಟ್ಟತ್ತಾರು ಮತ್ತು ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡದ ಮೇಲ್ಛಾವಣಿ ಶಿಥಲಗೊಂಡಿದ್ದು, ಅಪಾಯ ಸಂಭವಿಸುವ ಮೊದಲು ಕಟ್ಟಡದ ದುರಸ್ತಿಗೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಕೆಯ್ಯೂರು ಗ್ರಾಪಂ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ ನೂತನ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಅಧ್ಯಕ್ಷತೆಯಲ್ಲಿ ನಡೆಯಿತು. ಕಟ್ಟತ್ತಾರು ಶಾಲಾ ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಶೀಘ್ರವೇ ಈ ಕಟ್ಟಡವನ್ನು ದುರಸ್ತಿ ಮಾಡಿಕೊಡಬೇಕೆಂದು ಶಾಲೆ ವತಿಯಿಂದ ಪಂಚಾಯಿತಿಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ ಸದಸ್ಯ ಅಬ್ದುಲ್‌ಖಾದರ್ ಮೇರ್ಲ ತೆಗ್ಗು ಸರ್ಕಾರಿ ಶಾಲೆ ಮೇಲ್ಛಾವಣಿ ಕೂಡ ಅಪಾಯದ ಸ್ಥಿತಿಯಲ್ಲಿದೆ ಎಂದರು.

ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಮಾತನಾಡಿ, ಈ ಎರಡು ಶಾಲಾ ಕಟ್ಟಡಗಳ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸಲಾಗುವುದು. ಅಪಾಯವಿರುವ ವಿಚಾರ ಕಂಡು ಬಂದಲ್ಲಿ ತರಗತಿಗಳನ್ನು ಸ್ಥಳಾಂತರ ಮಾಡಿ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಜಯಂತಿ.ಎಸ್.ಭಂಡಾರಿ, ವಿಜಯಕುಮಾರ್, ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ಮಮತಾ ರೈ, ಸುಭಾಷಿಣಿ, ಅಮಿತಾ ಎಚ್ ರೈ, ನೆಬಿಸಾ, ಗಿರಿಜಾ ಅಭಿವೃದ್ಧಿ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಅವರು ಸಾರ್ವಜನಿಕ ಅರ್ಜಿ ಮತ್ತು ಸರ್ಕಾರದ ಸುತ್ತೋಲೆಗಳನ್ನು ಸಭೆ ಮುಂದಿಟ್ಟರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಕೆ. ನಿರ್ಣಯಗಳ ದಾಖಲಿಸಿಕೊಂಡರು.

ಸೋಲಾರ್ ದೀಪ: ಕೆಯ್ಯೂರು ಗ್ರಾಮದ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿರುವ ಸೋಲಾರ್ ದಾರಿ ದೀಪಗಳು ಉರಿಯದಿರುವ ಕುರಿತು ಸಾರ್ವಜನಿಕರಿಂದ ಬಂದ ಅರ್ಜಿ ಕುರಿತು ಚರ್ಚಿಸಲಾಯಿತು. ಸಾವಿರಾರು ರೂ. ಖರ್ಚು ಮಾಡಿ ಅಳವಡಿಸಿರುವ ಸೋಲಾರ್ ದಾರಿ ದೀಪ ಪ್ರಯೋಜನಕ್ಕೆ ಬರುತ್ತಿಲ್ಲ, ಒಂದೇ ವರ್ಷದೊಳಗೆ ಕೆಟ್ಟು ಹೋಗುತ್ತಿದ್ದು, ಇದರ ಬದಲು ವಿದ್ಯುತ್ ದಾರಿ ದೀಪ ಅಳವಡಿಸಿ ಎಂದು ಸದಸ್ಯ ಬಟ್ಯಪ್ಪ ರೈ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ತಾರಾನಾಥ ಕಂಪ, ವಿಜಯಕುಮಾರ್, ಶೇಷಪ್ಪ ದೇರ್ಲ, ಅಬ್ದುಲ್ ಖಾದರ್ ಮೇರ್ಲ ಮತ್ತಿತರರು ಸೋಲಾರ್ ಬದಲು ವಿದ್ಯುತ್ ದಾರಿ ದೀಪವೆ ಸೂಕ್ತ ಎಂದರು. ಕೆಟ್ಟು ಹೋದ ದಾರಿ ದೀಪಗಳನ್ನು ದಾರದೊಳಗೆ ದುರಸ್ತಿ ಪಡಿಸಲಾಗುವುದು ಎಂದು ಅಧ್ಯಕ್ಷ ಶರತ್‌ಕುಮಾರ್ ತಿಳಿಸಿದರು. ಕೆಯ್ಯೂರಿನ ದೇವಿನಗರ ಜಂಕ್ಷನ್‌ನಲ್ಲಿರುವ ದೇವಸ್ಥಾನದ ದ್ವಾರದ ಬಳಿ ಹೈಮಾಸ್ಕ್ ದೀಪ ಅಳವಡಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.