ಪಡುಬಿದ್ರಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಾಡಾಗಿರುವ ಪಡುಬಿದ್ರಿ ನಡ್ಸಾಲು ಶಾಲೆ 3ನೇ ವರ್ಷದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ.
2019-20ನೇ ಸಾಲಿನಲ್ಲಿ ಕೆಪಿಎಸ್ ಆಗಿ ಘೋಷಣೆಯಾಗಿರುವ ನಡ್ಸಾಲು ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದವರೆಗಿನ ತರಗತಿಗಳಿದ್ದು, ಸರ್ಕಾರದ ಆದೇಶದಂತೆ ಅಂದು ಎಲ್‌ಕೆಜಿಯಿಂದ 1ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿತ್ತು. ಅ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿಗೆ 6, ಯುಕೆಜಿಗೆ 10 ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣದ 1ನೇ ತರಗತಿಗೆ 7 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಅ ವರ್ಷದಲ್ಲಿ 1ರಿಂದ 7ನೇ ತರಗತಿವರೆಗೆ 105 ಮಕ್ಕಳನ್ನು ಹೊಂದಿದ್ದ ಶಾಲೆಯಲ್ಲಿ ಕರೊನಾ ಸಂಕಷ್ಟದಿಂದ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿಗೆ ದಾಖಲಾತಿ ಕೊಂಚ ಮಟ್ಟಿಗೆ ಏರಿಕೆ ಕಂಡಿತ್ತು. ಕರೊನಾ ಸಂಕಷ್ಟ ಹಾಗೂ ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕದಿಂದ ಬೇಸತ್ತ ಹಲವಾರು ಪಾಲಕರು ಈ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ವಿದ್ಯಾರ್ಥಿ ಸಂಖ್ಯೆ ಏರುಗತಿಗೆ ಕಾರಣವಾಗಿದೆ. ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಎಲ್‌ಕೆಜಿ 36, ಯುಕೆಜಿ 39, 1ನೇ ತರಗತಿ 28, 2ರಲ್ಲಿ 16, 3ರಲ್ಲಿ 14, 4ರಲ್ಲಿ 10, 5ರಲ್ಲಿ 12, 6ರಲ್ಲಿ 12 ಹಾಗೂ 7ನೇ ತರಗತಿಯಲ್ಲಿ 10 ವಿದ್ಯಾರ್ಥಿಗಳಿದ್ದಾರೆ. ಹೊರ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಾತಿಗೆ ಬೇಡಿಕೆಯಿದ್ದರೂ, ಸ್ಥಳೀಯ ವಿದ್ಯಾರ್ಥಿ ನಿಲಯ ನಿರ್ಮಾಣ ಹಂತದಲ್ಲಿರುವುದರಿಂದ ತೊಡಕಾಗಿದೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ
ಪ್ರಾಥಮಿಕ ವಿಭಾಗದಲ್ಲಿರುವ ಮೂರು ಶಿಕ್ಷಕರು ಹಾಗೂ ಪೂರ್ವ ಪ್ರಾಥಮಿಕ ವಿಭಾಗ ಇಬ್ಬರು ಅತಿಥಿ ಶಿಕ್ಷಕರು ತರಗತಿಗಳನ್ನು ನಿಭಾಯಿಸಬೇಕಾಗಿದ್ದು, ಅದರಲ್ಲಿ 2 ಅತಿಥಿ ಶಿಕ್ಷಕರಿಗೆ ಕಳೆದೊಂದು ವರ್ಷದಿಂದ ಗೌರವಧನವೇ ಪಾವತಿಯಾಗದೆ ತೊಂದರೆಯಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಇನ್ನಷ್ಟು ಶಿಕ್ಷಕರ ನಿಯೋಜನೆಯಾಗಬೇಕಿದೆ. ಕಳೆದ 3 ವರ್ಷಗಳಲ್ಲಿ ಶಾಲೆಗೆ ಕೆಲವೊಂದು ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದೆಯಾದರೂ ಕೆಪಿಎಸ್ ಸುತ್ತೋಲೆಯಲ್ಲಿರುವ ಸಾಕಷ್ಟು ಮಾನದಂಡಗಳು ಇನ್ನೂ ಕೈಗೂಡಿಲ್ಲ. ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹದ ಅವಶ್ಯಕತೆಯಿದೆ. ಆಂಗ್ಲ ಮಾಧ್ಯಮ ತರಗತಿಗೆ ಅಗತ್ಯವಿರುವ ಆಧುನಿಕ ಶಿಕ್ಷಣ ಸೌಕರ್ಯ, ಶಾಲೆಯ ಸುತ್ತ ಆವರಣಗೋಡೆ, ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಬೇಕಿದೆ. ಕೆಪಿಎಸ್ ಆದರೂ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿಭಾಗಗಳಿರುವುದರಿಂದ ಸಂಸ್ಥೆಯನ್ನು ಸಮಗ್ರವಾಗಿ ನಿರ್ವಹಣೆ ಗೊಂದಲ ನಿವಾರಣೆಯಾಗಬೇಕಿದೆ.
ಪ್ರೌಢಶಾಲೆ ಸೇರ್ಪಡೆ ಹಿಂದೇಟು
ಇಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಈ ಹಿಂದಿನ ಲೋಪಗಳಿಂದ ವಿದ್ಯಾರ್ಥಿಗಳ ದಾಖಲಾತಿಗೆ ಪಾಲಕರು ಹಿಂದೇಟು ಹಾಕುತ್ತಿದ್ದು, ಮಕ್ಕಳ ಸಂಖ್ಯೆ ಬೆರಳೆಣಿಕೆಗೆ ಇಳಿಯಲು ಕಾರಣವಾಗಿದೆ. ಪದವಿಪೂರ್ವ ವಿಭಾಗಕ್ಕೆ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರೂ ಅಗತ್ಯ ಸೌಕರ್ಯ ಕಲ್ಪಿಸಬೇಕಾದ ಅನಿವಾರ್ಯತೆ ಇದೆ. ಎರಡೂ ವಿಭಾಗಗಳಲ್ಲಿ ಆಮೂಲಾಗ್ರ ಬದಲಾವಣೆಗೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಸಮಿತಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎನ್ನುವ ಕೂಗು ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಪೂರ್ವ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ತಡೆಹಿಡಿದಿರುವ ಬಗ್ಗೆ ಶಾಲೆಯಿಂದ ಪತ್ರ ಬರೆಯುವಂತೆ ತಿಳಿಸಲಾಗಿದೆ. ಅದನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು. ಶಾಲಾ ಕಟ್ಟಡ ದುರಸ್ತಿಗೆ ಪ್ರಸ್ತಾವನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗುವುದು.
ನಾಗೇಂದ್ರಪ್ಪ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಉಡುಪಿ ವಲಯ
ಕೆಪಿಎಸ್‌ನಲ್ಲಿ ಎಲ್ಲ ವಿಭಾಗಗಳು ಒಂದೇ ಸೂರಿನಡಿ ಬರುವುದರಿಂದ ಒಂದೇ ಆಡಳಿತ ಸಮಿತಿಯಿರಲಿದ್ದು, ಪ್ರಾಂಶುಪಾಲರಿಗೆ ನಿರ್ವಹಣೆಯ ಹೊಣೆ ವಹಿಸಲಾಗಿದೆ. ಸಂಸ್ಥೆಯಲ್ಲಿನ ಆಂತರಿಕ ಗೊಂದಲ ಸರಿಪಡಿಸುವಂತೆ ಈಗಾಗಲೇ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಮೈದಾನದಲ್ಲಿ ಹೊಸ ಕೊಠಡಿ ನಿರ್ಮಾಣ ಬಗ್ಗೆ ಪ್ರಸ್ತಾವನೆಯಿದ್ದು, ಮೈದಾನ ಕಿರಿದಾಗುವ ಕಾರಣದಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆ ಕುರಿತಂತೆಯೂ ಸರ್ಕಾರದ ಗಮನಕ್ಕೆ ತರಲಾಗಿದೆ.
ಲಾಲಾಜಿ ಆರ್. ಮೆಂಡನ್, ಶಾಸಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು