ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಬೀಗ ಹಾಕಲಾದ ಸೂಡ ಪಡುಬೆಟ್ಟು ಸರ್ಕಾರಿ ಶಾಲೆ. 
ಜಿಲ್ಲೆ

ತೆರೆಗೆ ಸರಿದ ಸರ್ಕಾರಿ ಶಾಲೆ

Karthika K.S

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಸುಂದರ ಶಾಲಾ ಕಟ್ಟಡಗಳು, ವಿಶಾಲವಾದ ಆಟದ ಮೈದಾನ, ಸುತ್ತಲೂ ಹೂವಿನ ತೋಟವಿದ್ದರೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗೆ ಬೀಗ ಬಿದ್ದು ವರ್ಷ ಕಳೆಯುತ್ತಿದೆ.

ಕಾರ್ಕಳ ತಾಲೂಕಿನ ಸೂಡ ಪಡುಬೆಟ್ಟುವಿನಲ್ಲಿ 1979ರಲ್ಲಿ ಆರಂಭಗೊಂಡ ಸರ್ಕಾರಿ ಶಾಲೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಶಿಕ್ಷಣ ನೀಡುತ್ತಿತ್ತು. ಆರಂಭದಲ್ಲಿ ತುಂಬಿ ತುಳುಕುತ್ತಿದ್ದ ತರಗತಿ ಕೋಣೆಗಳು ಇತ್ತೀಚಿನ ಒಂದಿಷ್ಟು ವರ್ಷಗಳಿಂದ ಆಂಗ್ಲ ಮಾಧ್ಯಮದ ವ್ಯಾಮೋಹ, ಸರ್ಕಾರದ ನಿರಾಸಕ್ತಿ, ಶಿಕ್ಷಕರ ಕೊರೆತೆ, ಮಕ್ಕಳ ದಾಖಲಾತಿಯಲ್ಲೂ ಇಳಿಕೆಯಾಗಿದ್ದರಿಂದ ಸರ್ಕಾರಿ ಶಾಲೆಗೆ ಶಾಶ್ವತ ಬೀಗ ಹಾಕುವಂತಾಗಿದೆ.

ಬಾಗಿಲು ಮುಚ್ಚಿದ ಶಾಲೆ: ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಕಂಪನಿಗಳಲ್ಲಿ ಹಾಗೂ ದೇಶ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಒಂದು ಕಾಲದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದ್ದ ಈ ಶಾಲೆ ಕಾಲ ಕಳೆಯುತ್ತಿದ್ದಂತೆ ಆಂಗ್ಲ ಮಾಧ್ಯಮದ ಭರಾಟೆ ನಡುವೆ ವಿದ್ಯಾರ್ಥಿಗಳ ಸಮಸ್ಯೆ ಎದುರಿಸುವಂತಾಗಿತ್ತು. ಆದರೂ ಛಲ ಬಿಡದೆ ಇಲ್ಲಿನ ಮುಖ್ಯಶಿಕ್ಷಕರಾಗಿದ್ದ ನಂದಳಿಕೆ ಚಂದ್ರಶೇಖರ್ ಭಟ್ ಅವಿರತ ಶ್ರಮ ವಹಿಸಿ ದಾನಿಗಳ ಸಹಕಾರದಿಂದ ಗೌರವ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆ ಮುನ್ನಡೆಸಿದ್ದರು. ಆದರೆ 2023-24ರ ಶೈಕ್ಷಣಿಕ ವರ್ಷದ ಸಂದರ್ಭದಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಇಲ್ಲದ ಹಿನ್ನೆಲೆ ವಿದ್ಯಾ ದೇಗುಲಕ್ಕೆ ಬೀಗ ಹಾಕುವ ತೀರ್ವಾನಕ್ಕೆ ಶಿಕ್ಷಣ ಇಲಾಖೆ ಮುಂದಾಯಿತು. ಅದಂತೆ ಕಳೆದ ಒಂದು ವರ್ಷದಿಂದ ಈ ಶಾಲೆಯನ್ನು ಮುಚ್ಚಲಾಗಿದೆ. ಇತರ ತರಗತಿಯಲ್ಲಿ ಕಲಿಯುತ್ತಿದ್ದ ಒಂದಿಷ್ಟು ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲಿಸಲಾಗಿದೆ.

ಹಲವು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿದ ವಿದ್ಯಾ ದೇಗುಲವೊಂದು ಇತಿಹಾಸದ ಪುಟ ಸೇರುತ್ತಿರುವುದು ಬೇಸರದ ಸಂಗತಿ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಶಿಕ್ಷಕರ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ತೊಂದರೆಯಾಯಿತು. ದಾಖಲಾತಿ ಇಲ್ಲದೆ ಮಕ್ಕಳ ಹಾಗೂ ಶಿಕ್ಷಕರ ಕೊರತೆಯ ನಡುವೆ ಶಾಲೆಯನ್ನು ಮುಚ್ಚುವಂತಾಯಿತು. ಮೀನಾಕ್ಷಿ, ಹಳೇ ವಿದ್ಯಾರ್ಥಿ. ಈ ಶಾಲೆ ನಮ್ಮ ಹಳ್ಳಿಯ ಹೆಮ್ಮೆಯಾಗಿತ್ತು. ಇಲ್ಲಿ ಓದಿ ಅನೇಕರು ಉತ್ತಮ ಸ್ಥಾನಕ್ಕೇರಿದ್ದಾರೆ. ಇಂತಹ ಶಾಲೆ ಮುಚ್ಚಿದ್ದು ಬಹಳ ನೋವಿನ ಸಂಗತಿ. ಸಂಪತ್, ಹಳೇ ವಿದ್ಯಾರ್ಥಿ.

ಆಂಗ್ಲ ಮಾಧ್ಯಮದ ಭರಾಟೆ

ಇತ್ತೀಚಿನ ವರ್ಷಗಳಲ್ಲಿ ಅಲ್ಲಲ್ಲಿ ಹುಟ್ಟುಕೊಳ್ಳುವ ಆಂಗ್ಲ ಮಾಧ್ಯಮ ಶಾಲೆಗಳು ಹಾಗೂ ಆಂಗ್ಲ ಶಿಕ್ಷಣದ ವ್ಯಾಮೋಹ ಒಂದೆಡೆಯಾದರೆ, ಸರ್ಕಾರಿ ಶಾಲೆಯಲ್ಲಿ ತರಗತಿಗೊಬ್ಬರು ಶಿಕ್ಷಕರಿಲ್ಲ. ಇರುವ ಓರ್ವ ಶಿಕ್ಷಕನೇ ಎಲ್ಲ ತರಗತಿಯನ್ನು ಸುಧಾರಿಸುವ ಅನಿವಾರ್ಯತೆ ಕನ್ನಡ ವಾಧ್ಯಮ ಶಾಲೆಯಲ್ಲಿದೆ. ಹೆತ್ತವರು ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಆಂಗ್ಲ ಶಿಕ್ಷಣದತ್ತ ಒಲವು ತೋರುತ್ತಿರುವ ಪರಿಣಾಮ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಸರ್ಕಾರ ಸರ್ಕಾರಿಗಳ ಉಳಿವಿಗೆ ಶ್ರಮ ವಹಿಸುತ್ತಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಲ್ಲಿದೆ.