ಕೆಂಪಯ್ಯನ ದೊಡ್ಡಿ ಗ್ರಾಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಗಣ್ಯರು. 
ಜಿಲ್ಲೆ

ಜೀವನ ಪಾಠ ಕಲಿಸುವ ಸರ್ಕಾರಿ ಶಾಲೆ ಶಿಕ್ಷಣ

ಶಿವಶಂಕರ್ ಎಂ. ಹೆಬ್ಬಳ್ಳ

ನಿವೃತ್ತ ಮುಖ್ಯಶಿಕ್ಷಕ ಎ.ಎಸ್.ದೇವರಾಜ್ ಅಭಿಮತ

ಹಲಗೂರು : ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರಿ ಶಾಲೆ ಪ್ರತಿಯೊಬ್ಬರಿಗೂ ಜೀವನದ ಪಾಠವನ್ನು ಕಲಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು ಅಭಿಪ್ರಾಯಪಟ್ಟರು.

ಕೆಂಪಯ್ಯನದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುನಮನ, ಗುರುಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಕ ಎಂದರೆ ಶಾಲೆಯ ಸಮಯಕ್ಕೆ ಬಂದು ಪಾಠ ಮಾಡಿ ಹೋಗುವಂತಹ ಪರಿಪಾಠ ಸರಿಯಲ್ಲ, ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಬೋಧನೆ ಮಾಡಬೇಕು. ಎಲ್ಲವನ್ನು ಗಮನಿಸಬೇಕು. ಆಗ ಶಿಕ್ಷಕ ವೃತ್ತಿಗೆ ಗೌರವ ಬರುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ತಿದ್ದಬಹುದು, ದಂಡಿಸಬಹುದು, ಆ ಕ್ಷಣದಲ್ಲಿ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ತಪ್ಪಾದರೂ ಮುಂದೆ ಅವರಿಗೆ ತಿಳಿಯುತ್ತದೆ. ಕೆಂಪಯ್ಯನ ದೊಡ್ಡಿ ಚಿಕ್ಕ ಗ್ರಾಮವಾದರೂ ಹಳೆಯ ವಿದ್ಯಾರ್ಥಿಗಳ, ಗ್ರಾಮದವರ ಸಹಕಾರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ರಾಜಕೀಯವನ್ನು ಹೊರತುಪಡಿಸಿ ಎಲ್ಲರೂ ಒಂದಾಗಿ ಗುರುವಂದನ ಕಾರ್ಯಕ್ರಮವನ್ನು ನಡೆಸುತ್ತಿರುವುದು ತುಂಬ ಒಳ್ಳೆಯ ಸಂಗತಿ ಎಂದರು.

ಯಾವುದೇ ಕಾಲವಾದರೂ ಗುರು ತನ್ನ ಸ್ಥಾನವನ್ನು ಉಳಿಸಿಕೊಂಡು ಅರಿವೇ ಗುರು ಎಂಬಂತಿದ್ದರೆ, ಗುರು ಶಿಷ್ಯರ ಸಂಬಂಧ ಚೆನ್ನಾಗಿರುತ್ತದೆ. ಅವರು ಯಾವುದೇ ಸ್ಥಾನದಲ್ಲಿದ್ದರೂ ಅವರಿಗೆ ಗೌರವ ಸಿಗುತ್ತದೆ. ಶಿಕ್ಷಕ ವೃತ್ತಿ ದೇವರ ವರದಾನ, ಎಲ್ಲರಿಗೂ ಸಿಗುವಂತಹದ್ದಲ್ಲ. ಈ ಶಾಲೆಯ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಲೆಕ್ಕಿಸದೆ ಬಂದು ಇಲ್ಲಿ ಬಂದು ಪಾಠ ಮಾಡಿ ನಿಮಗೆ ವಿದ್ಯಾಭ್ಯಾಸ ನೀಡಿದ್ದರಿಂದ ನೀವು ವಿದ್ಯಾವಂತರಾಗಲು ಕಾರಣ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ಎಲ್ಲ ಸವಲತ್ತುಗಳು ಸಿಗುತ್ತವೆ. ಈ ಸರ್ಕಾರಿ ಶಾಲೆಯಲ್ಲಿ 14 ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾಭ್ಯಾಸ ಕೊಡ ಲಾಗುತ್ತಿದೆ. ಈ ತರಗತಿಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ವೇತನ ಹಾಗೂ ಮಕ್ಕಳಿಗೆ ಬೇಕಾದ ಊಟ ನೀಡಲು ಬೇಕಾದ ವ್ಯವಸ್ಥೆಯನ್ನು ಹಳೆಯ ವಿದ್ಯಾರ್ಥಿ ಸಂಘದವರು ವಹಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಬೆಂಗಳೂರು ಜಲ ಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್‌ಎನ್.ಸಿ. ಕಾಂತ ಮಾತನಾಡಿ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇನ್ನು ಉತ್ತಮ ರೀತಿಯಲ್ಲಿ ಈ ನಮ್ಮ ಸರ್ಕಾರಿ ಶಾಲೆ ಬೆಳೆಯಲಿ ಎಂದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕರನ್ನು ಎತ್ತಿನಗಾಡಿಯಲ್ಲಿ ಗ್ರಾಮದ ಬೀದಿಗಳಲ್ಲಿ ನಂದಿಧ್ವಜ ಕುಣಿತದೊಡನೆ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಿತು.

ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಹಾಗೂ ನಿವೃತ್ತಗೊಂಡಿರುವ ಶಿಕ್ಷಕರಾದ ಶಿವಲಿಂಗಯ್ಯ, ಜಿ.ಕೆ.ವಿಜಯ್‌ಕುಮಾರ್, ಎನ್. ಬಸವರಾಜು, ಎನ್. ಸೌಭಾಗ್ಯಾ, ಟಿ.ವಿ.ಸುಬ್ರಹ್ಮಣ್ಯ, ನಾಗರಾಜು, ಜ್ಯೋತಿ, ಲಕ್ಷ್ಮೀ, ಸತೀಶ್, ವೀಣಾ ,ಜ್ಯೋತಿ, ವಸಂತಾ, ಸುಂದರಪ್ಪ, ಪಿ.ಪವಿತ್ರಾ, ರಾಜೇಶ್ವರಿ, ಎಚ್.ಎಸ್.ನಳಿನಿ, ಎಂ.ರಮ್ಯಾ, ಧನುಶ್ರೀ, ರಚನಾ, ಶರತ್ ಕುಮಾರ್ ಸೇರಿದಂತೆ ಅಗಲಿದ ಗುರು ಚೇತನರ ಕುಟುಂಬಕ್ಕೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.