ಮೂಡಲಗಿ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಸ್ವಾವಲಂಬಿ ಬದುಕು ಸಾಧ್ಯವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದಲ್ಲಿ ಗ್ರಾಪಂ ಸಹಯೋಗದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಕೊಠಡಿ ಮತ್ತು 15 ಲಕ್ಷ ರೂ. ವೆಚ್ಚದ ಸಮುದಾಯ ಭವನ ಬಲಭೀಮ ದೇವಸ್ಥಾನದ ಸಮುದಾಯ ಭವನವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಶೇ. 33 ಮಹಿಳಾ ಮೀಸಲಾತಿ ಮಸೂದೆಯು ಈಗಾಗಲೇ ಅಂಗೀಕಾರವಾಗಿದೆ. ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಯೊಳಗೆ ಮಹಿಳೆಯರಿಗೆ ಜಾಕ್‌ಪಾಟ್ ಹೊಡೆಯಲಿದೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 74 ಸದಸ್ಯೆಯರು ಮತ್ತು ಲೋಕಸಭೆಯಲ್ಲಿ 180 ಜನ ಸಂಸದೆಯರಾಗಲಿದ್ದಾರೆ. ಮಹಿಳೆಯರ ಕಲ್ಯಾಣ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಸರ್ಕಾರ ಮಹಿಳಾ ಸ್ವ- ಸಹಾಯ ಸಂಘಗಳಿಗೆ ಸಾಲದ ರೂಪದಲ್ಲಿ ಪ್ರೋತ್ಸಾಹಧನ ನೀಡುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.
ಶಾಸಕರು ಎನ್‌ಆರ್‌ಎಲ್‌ಎಂ ಯೋಜನೆಯಡಿ ಹುಣಶ್ಯಾಳ ಪಿವೈ ಗ್ರಾಮದ ಜಡಿಸಿದ್ಧೇಶ್ವರ ಮತ್ತು ಮಹಾಲಕ್ಷ್ಮೀ ಸ್ವಸಹಾಯ ಸಂಘ ಮತ್ತು ಹೊಸಟ್ಟಿ ಗ್ರಾಮದ ಸರಸ್ವತಿ, ಮಹಾಲಕ್ಷ್ಮೀ, ಗಂಗಾಮಾತಾ ಮತ್ತು ಭುವನೇಶ್ವರಿ ಸ್ವ- ಸಹಾಯ ಸಂಘಗಳಿಗೆ ತಲಾ 1.50 ಲಕ್ಷ ರೂ. ಮೊತ್ತದ ಪ್ರೋತ್ಸಾಹ ಧನದ ಚೆಕ್ ವಿತರಿಸಿದರು.
ಗ್ರಾಪಂ ಅಧ್ಯಕ್ಷ ಜಗದೀಶ ಡೊಳ್ಳಿ, ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ತಾಪಂ ಇಒ ಕೀರಪ್ಪ ಚಿನ್ನನವರ, ಗ್ರಾಪಂ ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಪ್ರಮುಖರಾದ ಗೋಪಾಲ ಬಿಳ್ಳೂರ, ರವಿ ದೇಶಪಾಂಡೆ, ವೆಂಕನಗೌಡ ಪಾಟೀಲ, ಗೋವಿಂದಪ್ಪ ಗಿರಡ್ಡಿ, ಮುತ್ತೆಪ್ಪ ನಿಡಗುಂದಿ, ಪ್ರಕಾಶ ಪಾಟೀಲ, ಹನಮಂತ ಬಿಳ್ಳೂರ, ಪಿಡಿಒ ಉದಯ ಬೆಳ್ಳುಂಡಗಿ, ಅಶೋಕ ಪೂಜೇರಿ, ರೇಣುಕಾ ಅಂಬಿ, ಸುವರ್ಣಾ ಕುಂಬಾರ, ಪಾರ್ವತಿ ಕುರಿ, ರುಕ್ಮವ್ವ ಹೊಸಮನಿ ಇತರರಿದ್ದರು.