ಮಸ್ಕಿಯ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಎಎಸ್ಪಿ ಜಿ.ಹರೀಶ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪುರಸಭೆ ಅಧಿಕಾರಿ ನಾಗರಾಜ ಇದ್ದರು. 
ಜಿಲ್ಲೆ

ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

ರುದ್ರಪ್ಪ ವಾಲಿ

ಮಸ್ಕಿ: ತಾಲೂಕಿನಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸಬೇಕು ಎಂದು ಎಎಸ್ಪಿ ಜಿ.ಹರೀಶ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶ ಹಬ್ಬವನ್ನು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆಚರಿಸಬೇಕು. ಕರ್ಕಶ ಧ್ವನಿವರ್ಧಕ ಬಳಸುವುದು, ಡಿಜೆ ಹಚ್ಚಿ ಶಬ್ದ ಮಾಲಿನ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದು, ಮಣ್ಣಿನ ವಿಗ್ರಹ ಪ್ರತಿಷ್ಠಾಪಿಸಿ ಸರ್ಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಗಣೇಶೋತ್ಸವ ವೇಳೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಅತಂಹ ಘಟನೆಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಏಕಗವಾಕ್ಷಿಯಲ್ಲಿ ಪರವಾನಗಿ ನೀಡುತ್ತಿದ್ದು ಗಣೇಶ ಉತ್ಸವ ಸಮಿತಿಯವರು ಕಡ್ಡಾಯವಾಗಿ ಪಡೆಯಬೇಕು. 10 ಜನ ಸ್ವಯಂ ಸೇವಕರ ತಂಡ ರಚಿಸಿಕೊಂಡು ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪೊಲೀಸರು ಮತ್ತು ತಹಸೀಲ್ದಾರ್‌ಗೆ ನೀಡಬೇಕು. ಗಣೇಶ ವಿಸರ್ಜನೆ ಹೊಂಡದ ಬಳಿ ಈಜುಗಾರರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದರು.

ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಪತ್ರಕರ್ತ ಅಬ್ದುಲ್ ಅಜೀಜ್, ಆರ್.ಕೆ.ನಾಯಕ ಮಾತನಾಡಿದರು. ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ಕೆ.ರಂಗಯ್ಯ, ಪುರಸಭೆ ಅಧಿಕಾರಿ ನಾಗರಾಜ, ಜೆಸ್ಕಾಂನ ವೆಂಕಟೇಶ ಇತರರಿದ್ದರು.