ಬೆಂಗಳೂರು:ಪ್ರಸಕ್ತ ಸಾಲಿನ ಆಯುವ್ಯಯದಲ್ಲಿ ವಿಶೇಷ ಮೂಲಸೌಕರ್ಯ ಬಂಡವಾಳ ಯೋಜನೆಯಡಿ ನಿಗದಿಪಡಿಸಿದ್ದ ಒಟ್ಟು 3 ಸಾವಿರ ಕೋಟಿ ರೂ.ಪೈಕಿ 750 ಕೋಟಿ ರೂ.(ಮೊದಲ ಕಂತು) ಅನುದಾನವನ್ನು ಸರ್ಕಾರ, ಬಿಬಿಎಂಪಿಗೆ ಬಿಡುಗಡೆ ಮಾಡಿದೆ.
2025-26ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆ ಅಧೀನದ ವಿವಿಧ ಸಂಸ್ಥೆ, ಮಂಡಳಿ, ನಿಗಮ, ಪ್ರಾಧಿಕಾರ ಮತ್ತು ಪಾಲಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮವಹಿಸುವಂತೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ 3 ಸಾವಿರ ಕೋಟಿ ರೂ.ನಿಗದಿಪಡಿಸಿತ್ತು. ಬಜೆಟ್ನಲ್ಲಿ ಈ ಮೊತ್ತವನ್ನು ಹಂಚಿಕೆ ಮಾಡಲಾಗಿತ್ತು. ಪಾಲಿಕೆ ಮುಖ್ಯ ಆಯುಕ್ತರು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕೋರಿದ್ದರು. ಮೊದಲ ಕಂತಿನ ರೂಪದಲ್ಲಿ 750 ಕೋಟಿ ರೂ.ಅನುದಾನವನ್ನು ನಗರಾಭಿವೃದ್ಧಿ ಇಲಾಖೆ, ಕೆಲ ಷರತ್ತು ವಿಧಿಸಿ ಬಿಡುಗಡೆ ಮಾಡಿದೆ.
ವಿಶೇಷ ಮೂಲ ಸೌಕರ್ಯ ಯೋಜನೆಯ ಕಾಮಗಾರಿಗಳಿಗೆ ಮಾತ್ರ ಅನುದಾನ ಬಳಕೆ ಮಾಡಬೇಕು. ಅನುಮೋದನೆ ನೀಡಿರುವ ಕ್ರಿಯಾ ಯೋಜನೆ ಕಾಮಗಾರಿಗಳಿಗೆ ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ,ಉದ್ದೇಶಕ್ಕೆ ಬಳಕೆ ಮಾಡಬಾರದು. ಬಳಕೆ ಮಾಡಿದರೆ ಮುಖ್ಯ ಲೆಕ್ಕಾಧಿಕಾರಿಯನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಮುಂದೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿರುವ ವೇಳೆ ಹಣ ಬಳಕೆ ಮಾಡಿರುವ ಬಗ್ಗೆ ಪ್ರಗತಿ ವರದಿ ತಯಾರಿಸಿ ಸಲ್ಲಿಸಬೇಕು ಎಂದು ಇಲಾಖೆ, ಪಾಲಿಕೆಗೆ ಸೂಚಿಸಿದೆ.
ಸರ್ಕಾರಕ್ಕೆ ಕೃತಜ್ಞತೆ : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಬಿಲ್ಗಳ ಪಾವತಿಗೆ ಹಣ ಬಿಡುಗಡೆಗೆ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.