ಜಿಲ್ಲೆ

ಸರ್ಕಾರದಿಂದ ಬಾಕಿ ಹಣ ಬಿಡುಗಡೆ: ಪಡಿತರ ಲಾರಿ ಮಾಲೀಕರ ಮುಷ್ಕರ ವಾಪಸ್

ಬೆಂಗಳೂರು: ಪಡಿತರ ಸಾಗಣೆ ಸಂಬಂಧ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿರುವ ಹಿನ್ನೆಲೆ ಮಂಗಳವಾರ ಸಂಜೆಯಿಂದಲೇ ಲಾರಿ ಮಾಲೀಕರ ಸಂಘ ನಡೆಸಿದ್ದ ಮುಷ್ಕರ ಕೈಬಿಟ್ಟಿದೆ.

ಕಳೆದ ಫೆಬ್ರವರಿಯಿಂದ ಪಡಿತರ ಸಾಗನೆ ಶುಲ್ಕ, ಸಗಟು ಮತ್ತು ಚಿಲ್ಲರೆ ಲಾಭಾಂಶ ಬಾಬ್ತು ಪಾವತಿ ಮಾಡದ ಕಾರಣ ಲಾರಿ ಮಾಲಿಕರು ಮಂಗಳವಾರ ಬೆಳಗ್ಗೆ ಮುಷ್ಕರ ಆರಂಭಿಸಿದ್ದರು. ಅನ್ನಭಾಗ್ಯ ಅಡಿಯಲ್ಲಿ ಪಡಿತರ ವಿತರಣೆಗೆ ಅಡ್ಡಿ ಆಗಬಾರದೆಂಬ ಕಾಳಜಿ ವಹಿಸಿ ಸರ್ಕಾರ ಬಾಕಿ ಹಣ ಬಿಡುಗಡೆ ಸಂಬಂಧ ಕೆಲವೇ ಗಂಟೆಗಳಲ್ಲಿ ಕಡತ ವಿಲೇವಾರಿ ಮಾಡಿ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಲಾರಿ ಮಾಲೀಕರಿಗೆ ಒಟ್ಟು 265.89 ಕೋಟಿ ರೂ. ಬಾಕಿ ಪಾವತಿ ಆಗಬೇಕಿತ್ತು. ಈ ಪೈಕಿ ಕಳೆದ ಫೆಬ್ರವರಿಯಿಂದ ಮೇ ತಿಂಗಳವರೆಗೆ ನಾಲ್ಕು ತಿಂಗಳ ಅವಧಿಗೆ 244.10 ಕೋಟಿ ರೂ. ಹಣವನ್ನು ಆಹಾರ ಇಲಾಖೆ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ಆಹಾರ ಸಚಿವರ ಸೂಚನೆ ಮೇರೆಗೆ ಹಣಕಾಸು ಇಲಾಖೆಯು ಬಾಕಿ ಹಣ ಪಾವತಿ ಸಂಬಂಧ ಲೆಕ್ಕಾಚಾರ ನಡೆಸಿ ಕೆಲವೇ ಗಂಟೆಗಳಲ್ಲಿ ಹಣ ಬಿಡುಗಡೆ ಒಪ್ಪಿಗೆ ನೀಡಿದ್ದಕ್ಕೆ ಲಾರಿ ಮಾಲೀಕರ ಸಂಘ ಸಂತಸ ವ್ಯಕ್ತಪಡಿಸಿದೆ.

ಮುಷ್ಕರದಲ್ಲಿ ಪಾಲ್ಗೊಂಡಿರುವ ಲಾರಿ ಮಾಲಿಕರು ತಮ್ಮ ವಾಹನಗಳಿಂದ ತಕ್ಷನವೇ ಪಡಿತರ ಸಾಗಣೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿರುವ ಸಂಘವು, ಬಾಕಿ ಹಣದಲ್ಲಿ ಇನ್ನೂ 26 ಕೋಟಿ ರೂ. ಪಾವತಿಯಾಗಬೇಕಿದೆ. ಇದನ್ನು ಲೆಕ್ಕ ಹಾಕಿ ಬೇಗನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

ಸಂಘದಿಂದ ಧನ್ಯವಾದ ಅರ್ಪಣೆ:

ಬಾಕಿ ಹಣ ಬಿಡುಗಡೆ ಸಂಬಂಧ ತ್ವರಿತವಾಗಿ ಹಣ ಬಿಡುಗಡೆ ಮಾಡಿರುವುದಕ್ಕೆ ಸಿಎಂ, ಡಿಸಿಎಂ, ಆಹಾರ ಸಚಿವರು, ಆಹಾರ ಹಾಗೂ ಹಣಕಾಸು ಇಲಾಖಾ ಕಾರ್ಯದರ್ಶಿಯವರಿಗೆ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಧನ್ಯವಾದ ಅರ್ಪಿಸಿದ್ದಾರೆ.