ಜಿಲ್ಲೆ

ಇಲಾಖೆಗಳೇ ವಿಲೀನ: ಆಡಳಿತ ಸುಧಾರಣೆಗೆ ಸರ್ಕಾರ ಸಿದ್ಧತೆ, ಅನಗತ್ಯ ಹುದ್ದೆಗಳು ರದ್ದು

ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನರಿಗೆ ಗುಣಮಟ್ಟದ ಸೇವೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಆಡಳಿತ ಸುಧಾರಣೆ ಕೈಗೊಳ್ಳಲು ಸಿದ್ಧತೆ ಆರಂಭಿಸಿದೆ. ಕೆಲವು ಇಲಾಖೆಗಳ ವಿಲೀನ, ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಿ, ಅಗತ್ಯ ಹುದ್ದೆಗಳ ಭರ್ತಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶ.

ಈ ಹಿಂದೆ ರಚನೆಯಾಗಿದ್ದ ಆಡಳಿತ ಸುಧಾರಣಾ ಆಯೋಗ, ವೆಚ್ಚ ಸುಧಾರಣಾ ಆಯೋಗ, ಕಾಲಕಾಲಕ್ಕೆ ರಚನೆಯಾಗಿರುವ ಸಮಿತಿಗಳು, 6 ನೇ ವೇತನ ಆಯೋಗಗಳು ನೀಡಿರುವ ಶಿಫಾರಸುಗಳ ಆಧಾರದಲ್ಲಿ ಆಡಳಿತ ಬಿಗಿಗೊಳಿಸುವುದು ಸರ್ಕಾರದ ಚಿಂತನೆ. ಹಾಗೆಯೇ ಮಿತಿಮೀರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಹಳಿತಪ್ಪಿರುವ ಆಡಳಿತವನ್ನು ಸರಿದಾರಿಗೆ ತರುವ ಸಂಬಂಧ ಅಧ್ಯಯನ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ.

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಉಪಸಮಿತಿ ರಚನೆಯಾಗಿತ್ತು. ಆದರೆ ಸಮಿತಿ ಸಭೆಗಳನ್ನು ನಡೆಸುವುದಕ್ಕೆ ಮೊದಲೇ ಸರ್ಕಾರ ಬಿದ್ದುಹೋಯಿತು. ಇದೀಗ ಯಡಿಯೂರಪ್ಪ ಸರ್ಕಾರ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಐವರು ಮಂತ್ರಿಗಳ ಸಂಪುಟ ಉಪ ಸಮಿತಿ ರಚಿಸಿದೆ. ಈ ಸಮಿತಿ ಅಂತಿಮ ನಿರ್ಧಾರ ಮಾಡಬೇಕಾಗಿದೆ.

ಏನೇನು ಕ್ರಮ?: ಇಲಾಖೆಗಳ ವಿಲೀನ, ಅನಗತ್ಯ ಹೆಚ್ಚುವರಿ ಹುದ್ದೆ ರದ್ದತಿ, ಅಗತ್ಯ ಹುದ್ದೆ ಭರ್ತಿ, ಇಲಾಖೆಗಳ ಸಾಂಸ್ಥಿಕ ರಚನೆ, ಬೇರೆ ಬೇರೆ ಇಲಾಖೆಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಕಾರ್ಯ ಮಾಡಬೇಕಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಿಂದಿನ ಎಲ್ಲ ವರದಿಗಳನ್ನು ಸಂಪುಟ ಉಪ ಸಮಿತಿ ಮುಂದಿಡಲಿದೆ.

ಅನೇಕ ಇಲಾಖೆಗಳಲ್ಲಿ ಕೆಲಸ ಇಲ್ಲದಿದ್ದರೂ ಹುದ್ದೆಗಳಿವೆ, ಕೆಲಸ ಇರುವ ಕಡೆ ಸಿಬ್ಬಂದಿ ಇಲ್ಲ. ಲಿಪಿಕ ಸಿಬ್ಬಂದಿ ಹಾಗೂ ಕಾರ್ಯಾಚರಣೆ ಸಿಬ್ಬಂದಿ ನಡುವಿನ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅವುಗಳೆಲ್ಲವನ್ನೂ ಸರಿಪಡಿಸುವ ಮೂಲಕ ಸುಧಾರಣೆ ತರಬೇಕಾಗಿದೆ. ಒಂದೇ ರೀತಿಯ ಕೆಲಸ ಮಾಡುವ ಇಲಾಖೆಗಳನ್ನು ವಿಲೀನ ಮಾಡಿ ಸೇವೆ ಗುಣಮಟ್ಟ ಸುಧಾರಿಸಬೇಕಾಗಿದೆ.

ನೌಕರರ ಪ್ರವರ

*ಶೇ.33 ಹುದ್ದೆ ಖಾಲಿ

*ಶೇ.0.85 ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಇರುವ ನೌಕರರ ಪ್ರಮಾಣ

*7.73 ಲಕ್ಷ- ಒಟ್ಟಾರೆ ಮಂಜೂರಾತಿ ಹುದ್ದೆ

*5.20 ಲಕ್ಷ -ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಂಖ್ಯೆ ವೇತನಕ್ಕೆ 60 ಸಾವಿರ ಕೋಟಿ ರೂ.

ಒಟ್ಟಾರೆ ಶೇ. 33ರಷ್ಟು ಹುದ್ದೆ ಖಾಲಿ ಇದ್ದರೆ, ಕಾರ್ಯಾಚರಣೆ ಸಿಬ್ಬಂದಿ ಶೇ. 25, ಲಿಪಿಕ ಸಿಬ್ಬಂದಿ ಶೇ. 31 ಹಾಗೂ ಸಹಾಯಕ ಸೇವೆಗಳ ಸಿಬ್ಬಂದಿ ಶೇ. 50ರಷ್ಟು ಖಾಲಿ ಇವೆ. ನೌಕರರ ವೇತನ ಹಾಗೂ ನಿವೃತ್ತಿ ವೇತನಗಳಿಗೆ ವಾರ್ಷಿಕ 60 ಸಾವಿರ ಕೋಟಿ ರೂ.ವೆಚ್ಚವಾಗುತ್ತಿದೆ. ಹೀಗಾಗಿ ಹುದ್ದೆಗಳನ್ನು ಕಡಿಮೆ ಮಾಡಿ, ತಂತ್ರಜ್ಞಾನ ಬಳಕೆ ಮಾಡಿ ಗುಣಮಟ್ಟದ ಸೇವೆ ನೀಡುವ ಚಿಂತನೆ ಕುಡಿಯೊಡೆದಿದೆ. ಆದರೆ ಕೆಳಹಂತದಲ್ಲಿ ಸಿಬ್ಬಂದಿ ಕೊರತೆ ಇದೆ ಹಾಗೂ ಕೆಲಸದ ಒತ್ತಡ ಹೆಚ್ಚಿಗೆಯಿದೆ ಎಂಬುದು ನೌಕರರ ವಾದ. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲದಿರುವ ಕಾರಣ ಇಲಾಖೆಗಳ ವಿಲೀನ, ಹೆಚ್ಚುವರಿ ಸಿಬ್ಬಂದಿ ಬೇರೆ ಕಡೆ ನಿಯೋಜನೆ ಮೂಲಕ ಗುಣಮಟ್ಟದ ಸೇವೆ ನೀಡುವುದು ಸರ್ಕಾರದ ಉದ್ದೇಶ.

ಕೆಲಸಗಳು ನಕಲು ಎಲ್ಲಿ?

* ಕೃಷಿ, ತೋಟಗಾರಿಕೆ ಇಲಾಖೆಗಳು

* ಸಹಕಾರ- ಕೃಷಿ ಮಾರುಕಟ್ಟೆ

* ಹಿಂದುಳಿದ, ಅಲ್ಪಸಂಖ್ಯಾತ, ಸಮಾಜ ಕಲ್ಯಾಣ

ಉಪ ಸಮಿತಿಯಲ್ಲಿ ಯಾರ್ಯಾರು

ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದ ಸಮಿತಿಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸದಸ್ಯರಾಗಿದ್ದಾರೆ. ಉಪ ಸಮಿತಿ ಮೂರು ತಿಂಗಳಿನಲ್ಲಿ ವರದಿ ಸಲ್ಲಿಸಬೇಕಾಗಿದೆ. 6 ನೇ ವೇತನ ಆಯೋಗದ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವೃಂದಗಳ ವೈಜ್ಞಾನಿಕ ಪರಿಷ್ಕರಣೆ, ಹುದ್ದೆಗಳ ರದ್ದತಿ, ಮರು ವಿನ್ಯಾಸ, ಇಲಾಖೆಗಳ ವಿಲೀನ ಹಾಗೂ ರದ್ದು ಕುರಿತು ಅಧ್ಯಯನ ಮಾಡಿ ವರದಿ ನೀಡಬೇಕಾಗಿದೆ.

ಆಡಳಿತ ಸುಧಾರಣೆಗೆ ನಮ್ಮ ವಿರೋಧ ಇಲ್ಲ. ಆದರೆ ಸುಧಾರಣೆಯ ಹೆಸರಿನಲ್ಲಿ ನೌಕರರ ಹಕ್ಕಿಗೆ ಚ್ಯುತಿ ಬಂದರೆ ಹೋರಾಟ ಇದ್ದೇ ಇರುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕಡೆಗೂ ಗಮನ ಹರಿಸಬೇಕಾಗಿದೆ. -ಪಿ. ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

ಏನೇನು ಅನುಕೂಲ?

  • ಅಗತ್ಯ ಇರುವ ಕಡೆ ಸಿಬ್ಬಂದಿ ಕೊರತೆ ನೀಗುತ್ತದೆ
  • ಕಚೇರಿ ಕಟ್ಟಡಗಳ ಬಾಡಿಗೆ, ಟೆಲಿಪೋನ್ ಬಿಲ್​ನಲ್ಲಿ ಉಳಿತಾಯ
  • ವಿದ್ಯುತ್, ನೀರು ಉಳಿತಾಯ
  • ಹೆಚ್ಚುವರಿ ಕಾರುಗಳ

ಬಳಕೆಗೆ ತಡೆ

ಅಧಿಕಾರಿಗಳಿಗಾಗಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಆದ್ದರಿಂದ ಸುಧಾರಣೆ ತರುವ ಅಗತ್ಯವಿದೆ. ಇದರಿಂದ ಸರ್ಕಾರಕ್ಕೆ ಉಳಿತಾಯವೂ ಆಗುತ್ತದೆ. ತಕ್ಷಣ ಸಭೆ ನಡೆಸಿ ಕೆಲವೊಂದು ತೀರ್ಮಾನ ಮಾಡಲಾಗುತ್ತದೆ. | ಆರ್.ಅಶೋಕ್ ಕಂದಾಯ ಸಚಿವ

ವಿಲೀನ ಸಾಧ್ಯತೆ ಇರುವ ಇಲಾಖೆಗಳು

  • ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ, ರಾಜ್ಯ ಲೆಕ್ಕ ಪರಿಶೀಲನಾ ಇಲಾಖೆ ಹಾಗೂ ಲೆಕ್ಕಪತ್ರ ಇಲಾಖೆ
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಾನೂನು ಮಾಪನ ಇಲಾಖೆ ಸೇರ್ಪಡೆ
  • ಕಾನೂನು ಮಾಪನ ಇಲಾಖೆಯಲ್ಲಿ 500 ಸಿಬ್ಬಂದಿ ಇದ್ದು, ಶೇ.50 ಹುದ್ದೆ ಖಾಲಿ ಇವೆ. ಆಹಾರ ಇಲಾಖೆಯಲ್ಲಿ 1600 ಹುದ್ದೆಗಳಿದ್ದು, 880 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಮಾಪನ ಇಲಾಖೆಯ 500 ಜನರನ್ನು ಸೇರಿಸಿದರೆ ಇಲಾಖೆ ಬಲವಾಗುತ್ತದೆ
  • ವಿಮೆ, ಪಿಂಚಣಿ, ಆಸ್ತಿ ಋಣ ನಿರ್ವಹಣೆ ಇಲಾಖೆಗಳನ್ನು ಪರಸ್ಪರ ವಿಲೀನ ಮಾಡುವುದು
  • ರಾಜ್ಯ ಗೆಜೆಟಿಯರ್ ಹಾಗೂ ಪತ್ರಾಗಾರ ಇಲಾಖೆಗಳನ್ನು ಒಗ್ಗೂಡಿಸುವುದು
  • ಭಾಷಾಂತರ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ವಿಲೀನ ಮಾಡುವುದು
  • ಪ್ರವಾಸೋದ್ಯಮ ಹಾಗೂ ಪ್ರಾಚ್ಯವಸ್ತು ಇಲಾಖೆಗಳ ವಿಲೀನ
  • ಪಿಯು ಇಲಾಖೆಯ ಗ್ರಂಥಪಾಲಕರು ಗ್ರಂಥಾಲಯ ಇಲಾಖೆಯಲ್ಲಿ ನಿಯೋಜನೆ ಮಾಡುವುದು

ಯಾವೆಲ್ಲ ಹುದ್ದೆ ರದ್ದು?

  • ಎಲ್ಲ ಇಲಾಖೆಗಳ ಪತ್ರಾಂಕಿತ ವ್ಯವ ಸ್ಥಾಪಕರು, ಖಜಾನೆ ಇಲಾಖೆ ಸಿಬ್ಬಂದಿ
  • ಕಂಪ್ಯೂಟರ್ ಇಂಜಿನಿಯರ್ ಇರುವಾಗ ಆಪರೇಟರ್​ಗಳು, ಸಿಸ್ಟಂ ಅನಾಲಿಸ್ಟ್ ಹುದ್ದೆಗಳು ಅನಗತ್ಯ
  • ಪ್ರಾದೇಶಿಕ ಆಯುಕ್ತರ ಹುದ್ದೆಗಳು
  • ರೇಷ್ಮೆ ಬೆಳೆ ಇಲ್ಲದ ಪ್ರದೇಶದಲ್ಲಿರುವ ರೇಷ್ಮೆ ಇಲಾಖೆ ನೌಕರರು ಬೇರೆ ಕಡೆಗೆ ಸ್ಥಳಾಂತರ ಸಾಧ್ಯತೆ, ಮೀನುಗಾರಿಕೆ ಇಲಾಖೆಯಲ್ಲೂ ಹುದ್ದೆಗಳ ಮರು ವಿನ್ಯಾಸ ಆಗಬಹುದು.
ಸುಧಾರಣೆ ಕ್ರಮಕ್ಕೆ ಸ್ವಾಗತ. ಹುದ್ದೆಗಳನ್ನು ಮರು ವಿನ್ಯಾಸ ಮಾಡಿದರೆ ನೌಕರರು ಒತ್ತಡವಿಲ್ಲದೇ ಕೆಲಸ ಮಾಡಬಹುದು. ಉಪ ಸಮಿತಿಯ ಮುಂದೆ ಅಭಿಪ್ರಾಯ ಹೇಳುತ್ತೇವೆ. | ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

| ರುದ್ರಣ್ಣ ಹರ್ತಿಕೋಟೆ