ಜಿಲ್ಲೆ

ಅರ್ಹರು ಯೋಜನೆಗಳ ಸೌಲಭ್ಯ ಬಳಸಿಕೊಳ್ಳಿ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ

reportermys

ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇ-ಶ್ರಮ ಮತ್ತು ಪಿಎಂಎಸ್‌ವೈಎಂ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಇ-ಶ್ರಮ ಹಾಗೂ ಪಿಎಂಎಸ್‌ವೈಎಂ ಯೋಜನೆಯ ಜಾಗೃತಿ ಮೂಡಿಸುವ ವಾಹನಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮತ್ತು ಸ್ಥಳದಲ್ಲಿ ನೋಂದಣಿ ಮಾಡಿಸುವ ಸಲುವಾಗಿ ಮಾಹಿತಿ ವಾಹನಗಳ ಸಂಚಾರ ಮಾಡಲಿದೆ. ಅರ್ಹರು ಸೌಲಭ್ಯವನ್ನು ಬಳಸಿಕೊಳ್ಳಿ ಎಂದರು.

ಕಾರ್ಮಿಕ ಅಧಿಕಾರಿ ಮಂಜುಳಾದೇವಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗಾಗಿ ಈ ಯೋಜನೆ ಲಭ್ಯವಿದೆ. ಇ-ಶ್ರಮ ಯೋಜನೆಯಡಿ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು. ಇದರ ಪ್ರಯೋಜನಗಳೇನು ಎಂಬುದನ್ನು ಮಾಹಿತಿ ವಾಹನಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಬಾಲ್ಯ ಮತ್ತು ಕಿಶೋರ ವ್ಯವಸ್ಥೆಯ ಕಾರ್ಮಿಕ ಕಾಯ್ದೆಯಡಿ ಜಾಗೃತಿ ಅಭಿಯಾನ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಂದು ವಾಹನದಲ್ಲಿ ಎಲ್‌ಇಡಿ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಮಂಡ್ಯ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ, ಯೋಜನೆ ನಿರ್ದೇಶಕ ಪ್ರಭಾಕರ್, ತಾಲೂಕು ಪರಿವೀಕ್ಷಕರಾದ ಸ್ವಾಮಿ, ನಾಗರತ್ನ ಇತರರಿದ್ದರು.