ತಿಪ್ಪೆಗುಂಡಿಯಾಗಿ ಮಾರ್ಪಟ್ಟ ರಂಜಣಗಿ ಸರ್ಕಾರಿ ಶಾಲೆಯ ಮೈದಾನ. 
ಜಿಲ್ಲೆ

ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಿತಿ ಅಯೋಮಯ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ಕಾಲಿಟ್ಟರೆ ಸಾಕು ಗಲೀಜು.., ಶಾಲೆಗೆ ಹೋಗುವ ಮುನ್ನವೇ ಮಕ್ಕಳ ಕನಸುಗಳೇ ನುಚ್ಚು ನೂರು..! ಇದೊಂದು ಆಟದ ಮೈದಾನವೋ, ತಿಪ್ಪೆಗುಂಡಿಯೋ ಎಂಬ ಗೊಂದಲ ಉಂಟಾಗುತ್ತದೆ.

ಮುಧೋಳ ತಾಲೂಕಿನ ರಂಜಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಸ್ತವ ಚಿತ್ರಣವಿದು. ಸರ್ಕಾರ ಕೋಟ್ಯಂತರ ರೂ. ಶಿಕ್ಷಣಕ್ಕಾಗಿ ವ್ಯಯ ಮಾಡುತ್ತಿದೆ. ಮಕ್ಕಳಿಗೆ ಪಾಠ, ಪ್ರವಚನ ಜೊತೆಗೆ ಸ್ವಚ್ಛತೆ, ಆಟೋಟಕ್ಕೆ ಮೈದಾನ ನಿರ್ಮಿಸುತ್ತದೆ. ಇಲ್ಲಿ ಎಲ್ಲವೂ ಆಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆ, ಗ್ರಾಮಸ್ಥರ ನೀರವ ಮೌನದ ಪರಿಣಾಮ ಶಾಲೆ ವ್ಯವಸ್ಥೆಯೇ ಸಂಪೂರ್ಣ ಹದಗೆಟ್ಟು ಹೋಗಿದೆ.

ಮಳೆಯಾದರೆ ಸಾಕು ಶಾಲಾ ಆವರಣದ ತುಂಬ ಮಳೆ ನೀರು ಆವರಿಸುತ್ತದೆ. ಸುತ್ತಮುತ್ತಲಿನಿಂದ ಬರುವ ಕಸ, ಕಡ್ಡಿ, ಗಲೀಜು ತುಂಬಿ ಗಬ್ಬೆದ್ದು ಹೋಗಿದೆ. ತರಗತಿ ಪ್ರವೇಶ ಮಾಡುವಾಗಲೇ ನೂರೆಂಟು ಸಾರಿ ವಿಚಾರ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಶಾಲೆ ಎಸ್‌ಡಿಎಂಸಿಯವರು, ಶಿಕ್ಷಕರು ಕೂಡ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರು, ಪಾಲಕರಲ್ಲಿ ಬೇಸರ ತರಿಸಿದೆ. ಸರ್ಕಾರ ಅನುದಾನ ನೀಡಿದರೂ ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳದಿರುವುದು ಶಾಲೆಯ ದುರಂತ ಸಂಗತಿ.

ಶಾಲಾ ಆವರಣದಲ್ಲಿ ಗಲೀಜು ತುಂಬಿದ್ದರಿಂದ ಊಟದ ಕೊಠಡಿಯಲ್ಲಿ ನಿತ್ಯವೂ ಮಕ್ಕಳ ಪ್ರಾರ್ಥನೆ ನಡೆಯುತ್ತದೆ. ಎಂಟು ಜನ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿ 523 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

ಮೈದಾನ ತಿಪ್ಪೆಗುಂಡಿ

ಮಕ್ಕಳ ಶಾರೀರಿಕ ಬೆಳವಣಿಗಾಗಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಾಲೆಗೆ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಮೈದಾನ ಮಂಜೂರು ಮಾಡಿ ಸೌಲಭ್ಯ ಕಲ್ಪಿಸಿದೆ. ಆದರೆ, ಮೈದಾನ ಮಕ್ಕಳಿಗೆ ಉಪಯೋಗವಾಗುತ್ತಿಲ್ಲ. ತಿಪ್ಪೆಗುಂಡಿಯಾಗಿ ಬಳಕೆ ಮಾಡಲಾಗುತ್ತಿದೆ. ಶಾಲೆ ಕೂಗಳತೆಯ ದೂರದಲ್ಲಿ ಮೈದಾನವಿದ್ದರು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದು ಯಾರೊಬ್ಬರು ಮೇಲೆಯೂ ಶಿಸ್ತು ಕ್ರಮವಾಗಿಲ್ಲ. ಕಸದ ರಾಶಿ, ಮರಳಿನ ಗೋಪುರ, ಇಟ್ಟಂಗಿಗಳನ್ನು ಇಟ್ಟಿರುವುದು ಕಣ್ಣಿಗೆ ರಾಚುತ್ತದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗ ತೊಡಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಸದಾ ಮನೆ ಮಾಡುತ್ತದೆ.

ಮಾದರಿ ಶಾಲೆಯಿಂದ ಹಿಂಭಡ್ತಿ; 250 ಕ್ಕೂ ಅಧಿಕ ಮಕ್ಕಳಿದ್ದಾಗ ಮಾತ್ರ ಮಾದರಿ ಶಾಲೆ ಅಂತ ಸರ್ಕಾರ ತನ್ನ ಪಟ್ಟಿಯಲ್ಲಿ ಸೇರ್ಪಡೆಗೊಳಿಸುತ್ತದೆ. ಶಾಲಾ ವಾತವರಣ ಕೆಟ್ಟು ಹೋದ ಪರಿಣಾಮ ಮಕ್ಕಳ ಸಂಖ್ಯೆ ಕ್ಷಿಣಿಸಿತು. ಇದರಿಂದ ಮಾದರಿ ಶಾಲೆ ಪಟ್ಟಿಯಿಂದ ಈ ಶಾಲೆ ಹೊರಗೆ ಉಳಿಯುವಂತಾಯಿತು. ಸದ್ಯ 200 ಮಕ್ಕಳು ಮಾತ್ರ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಹೀಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂತ ಮಾತ್ರ ಇದೆ. ಸೌಲಭ್ಯವಿದ್ದರು ನಿಸ್ಸಕಾಳಜಿಗೆ ಶಾಲೆಯುವ ತತ್ತರಿಸಿ ಹೋಗಿದೆ.

ಸರ್ಕಾರಿ ಶಾಲೆಗೆ ಮಕ್ಕಳು ಕಡಿಮೆಯಾಗಲು ಸಮಾಜ ಹಾಗೂ ಸರ್ಕಾರ ಕಾರಣವಾಗುತ್ತದೆ. ಸದ್ಯ ವಲಯ ಮಟ್ಟದ ಕ್ರೀಡಾಕೂಟ ಬಂದಿದ್ದು ಕೂಡಲೇ ಮಕ್ಕಳಿಗೆ ಆಟವಾಡಲು ಮೈದಾನಬೇಕು. ಆದರೇ ಮೈದಾನವೇ ಇದ್ದು ಇಲ್ಲದಂತಾಗಿದೆ. ತಿಪ್ಪೆಗುಂಡಿಯಾಗಿದ್ದು, ಕೀಡಾಕೂಟ ನಡೆಸಲು ಬಹಳ ಕಷ್ಟಕರ. -ರವಿ ನ್ಯಾಮಗೌಡರ ಶಿಕ್ಷಣ ಪ್ರೇಮಿ, ಗ್ರಾಮಸ್ಥ ರಂಜಣಗಿ ಶಾಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಆದರೇ ಸರ್ಕಾರ ನೀಡಿದ ಸೌಲಭ್ಯಗಳು ಉಪಯೋಗವಾಗಿಲ್ಲ ಎನ್ನುವುದು ಬೇಸರ ಮೂಡಿಸಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ತುರ್ತಾಗಿ ಕ್ರಮ ವಹಿಸಲಾಗುವುದು. ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಕರು, ಗ್ರಾಮಸ್ಥರಿಗೆ ತಿಳಿಸಲಾಗುವುದು. -ಎಸ್.ಎಂ.ಮುಲ್ಲಾ ಬಿಇಒ ಮುಧೋಳ