ಕಾರಟಗಿಯಲ್ಲಿ ಶಾಸಕ ಬಸವರಾಜ ದಢೇಸುಗೂರಗೆ ಬೂದಗುಂಪಾ, ಹಾಲಸಮುದ್ರ ಹಾಗೂ ತಿಮ್ಮಾಪುರ ಗ್ರಾಮಗಳ ಹಳೇ ವಿದ್ಯಾರ್ಥಿಗಳು ಸೋಮವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ಸರ್ಕಾರಿ ಪಪೂ ಕಾಲೇಜು ಮಂಜೂರು ಮಾಡಿಸಿ: ಕಾರಟಗಿಯಲ್ಲಿ ಶಾಸಕಗೆ ತ್ರಿವಳಿ ಗ್ರಾಮಗಳ ಹಳೇ ವಿದ್ಯಾರ್ಥಿಗಳ ಆಗ್ರಹ

ಕಾರಟಗಿ: ತಾಲೂಕಿನ ಬೂದಗುಂಪಾ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸಬೇಕೆಂದು ಆಗ್ರಹಿಸಿ ಬೂದಗುಂಪಾ, ಹಾಲಸಮುದ್ರ ಹಾಗೂ ತಿಮ್ಮಾಪುರ ಗ್ರಾಮಗಳ ಹಳೇ ವಿದ್ಯಾರ್ಥಿಗಳು ಸೋಮವಾರ ಶಾಸಕ ಬಸವರಾಜ ದಢೇಸುಗೂರುಗೆ ಮನವಿ ಸಲ್ಲಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಿಂದ ಶಾಸಕರ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಳೇ ವಿದ್ಯಾರ್ಥಿಗಳು, ತ್ರಿವಳಿ ಗ್ರಾಮಗಳಲ್ಲಿ ನೂರಾರು ವಿದ್ಯಾರ್ಥಿಗಳು ಪ್ರೌಢಶಾಲೆ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪದವಿಪೂರ್ವ ಕಾಲೇಜಿಗಾಗಿ ಅಲೆದಾಡುವಂತಾಗಿದೆ. ಕಾಲೇಜು ಮಂಜೂರು ಮಾಡುವಂತೆ ಹಲವು ವರ್ಷಗಳ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ. ಸರ್ಕಾರ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು ಬೂದಗುಂಪಾ ಗ್ರಾಮವನ್ನು ಕೈ ಬಿಡಲಾಗಿದೆ. ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸುವ ಜತೆಗೆ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಬಸವರಾಜ ದಢೇಸುಗೂರು ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗವುದು. ಸಾಧ್ಯವಾದಷ್ಟು ಕಾಲೇಜು ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.