ಜಿಲ್ಲೆ

ಹಿಂದುಗಳ ಭಾವನೆ ಜತೆ ಸರ್ಕಾರದ ಚೆಲ್ಲಾಟ

ಶೃಂಗೇರಿ: ರೈತರ ಜಮೀನುಗಳು, ದೇವಸ್ಥಾನಗಳು ವಕ್ಛ್ ಭೂಮಿಯಾಗಿ ಪರಿವರ್ತನೆ ಆಗದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲ ಹಾಗೂ ತಾಲೂಕು ರೈತ ಮೋರ್ಚಾ ಕಾರ್ಯಕರ್ತರು ಸೋಮವಾರ ಉಪತಹಸೀಲ್ದಾರ್ ಅನುಪ್‌ಗೆ ಮನವಿ ಸಲ್ಲಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ಹಿಂದುಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳಿಗೆ ಸಂಬಂಧಪಟ್ಟ ದೇವಾಲಯಗಳನ್ನು ಹಂತ-ಹಂತವಾಗಿ ವಕ್ಛ್ ಮಂಡಳಿ ಕಬಳಿಸುವ ಪ್ರಯತ್ನದಲ್ಲಿದೆ. ಮಂಡಳಿಗೆ ಎಲ್ಲ ಸಹಕಾರ ನೀಡುತ್ತಿರುವ ಸರ್ಕಾರದ ಜನಸಾಮಾನ್ಯರ ಜಾಗ ಕಬಳಿಸಲು ಹೊರಟಿರುವುದು ಖಂಡನೀಯ. ನಮ್ಮದು ಜಾತ್ಯಾತೀತ ದೇಶ. ಎಲ್ಲರೂ ದೇಶದ ಸತ್ಪ್ರಜೆಗಳು. ಹಿಂದುಗಳ ಭಾವನೆಗಳ ಜತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.ಇದನ್ನು ಬಿಜೆಪಿ ಸಹಿಸುವುದಿಲ್ಲ. ಹೀಗೆ ಕಬಳಿಕೆ ಪ್ರಕ್ರಿಯೆ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಪಪಂ ಉಪಾಧ್ಯಕ್ಷ ಪ್ರಕಾಶ್, ಬಿಜೆಪಿ ಮುಖಂಡರಾದ ನೂತನ್ ಕುಮಾರ್, ಶ್ರೀಧರ್ ಅಣ್ಣುಕೊಡಿಗೆ, ಬಿ.ಶಿವಶಂಕರ್, ಮನುಕೊಚ್ಚವಳ್ಳಿ, ವೆಂಕಟೇಶ್ ಮಿಗಿನಕಲ್ಲು ಉಪಸ್ಥಿತರಿದ್ದರು.