ಮೈಸೂರು: ಆರ್‌ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಂಡು 11 ಜನರು ಮೃತಪಟ್ಟಿರುವುದು ಅತ್ಯಂತ ದುಃಖದ ವಿಚಾರ. ಈ ದುರಂತಕ್ಕೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಕ್ರಿಕೆಟ್ ಪಟುಗಳನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಹೀಗಿದ್ದರೂ ಜನರು ಏತಕ್ಕೆ ಅಷ್ಟೊಂದು ಸಂಖ್ಯೆಯಲ್ಲಿ ಸೇರಿದರು? ಮನೆ ಯಲ್ಲಿಯೇ ಕುಳಿತು ಟಿವಿ ಮೂಲಕ ನೋಡಬಹುದಿತ್ತಲ್ಲವೇ? ಸರ್ಕಾರ ಸರಿ ಇಲ್ಲ ಎಂದು ಟೀಕಿಸಬಹುದು. ಆದರೆ, ನೀವು ಸರಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರವನ್ನು ನಾವು ಟೀಕಿಸುತ್ತೇವೆ, ಅವರು ಎಷ್ಟೂಂತ ಮಾಡಲು ಸಾಧ್ಯ. ಆಕಾಶಕ್ಕೆ ಚಪ್ಪರ ಹಾಕಲು ಸಾಧ್ಯವೇ? ಎಲ್ಲೋ ಒಂದು ಮೂಲೆಯಲ್ಲಿ ಏನೋ ಆದರೆ ಯಾರು ಜವಾಬ್ದಾರಿ? ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಎಷ್ಟೂಂತ ಪೊಲೀಸರನ್ನು ನಿಯೋಜಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ನೀರನ್ನು ಉಚಿತವಾಗಿ ನೀಡಿದರೂ ಜನರು ಗುಂಪುಗೂಡುತ್ತಾರೆ. ಹಾಗಾಗಿ ಜನರು ಪರಿವರ್ತನೆ ಆಗಬೇಕೇ ಹೊರತು ಸರ್ಕಾರವಲ್ಲ. ದುರ್ಘಟನೆ ಕೇಳಿ ನನಗೆ ಬಹಳ ಸಂಕಷ್ಟವಾಯಿತು. ತಿರುಪತಿ, ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತ ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಜನರು ಶಿಸ್ತು ಬೆಳೆಸಿಕೊಳ್ಳಬೇಕು. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದರೆ ಅವರ ಜೀವ ವಾಪಾಸ್ ಬರಲು ಸಾಧ್ಯವೇ? ಜನರು ಇನ್ನಾದರೂ ಅರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.