ಹಾಸನ: ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ. ಆಸಕ್ತಿಯನ್ನೂ ತೋರಿಸುತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ಕಾಚೇನಹಳ್ಳಿ ಏತ ನೀರಾವರಿ ಮೊದಲ ಹಂತ, ಎರಡನೇ ಹಂತ ಕಾಮಗಾರಿಗೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 165 ಕೋಟಿ ರೂ.ನೀಡಿದರು. ನಂತರ ಕೆಲವರು ಬಂದು ಉದ್ಘಾಟನೆ ಮಾಡಿ ಭಾಷಣ ಮಾಡಿ ಹೋದರು, ಅಲ್ಲಿಂದ ಇಲ್ಲಿವರೆಗೂ ಏನೂ ಆಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಆಲಗೋಡನಹಳ್ಳಿ ಲಿಫ್ಟ್ ಇರಿಗೇಷನ್ ಮೂಲಕ 26 ಕೆರೆಗಳಿಗೆ ನೀರು ತುಂಬಿಸಲು 47 ಕೋಟಿ ರೂ.ಗಳನ್ನು 2019 ರಲ್ಲೇ ಕೊಡಿಸಲಾಯಿತು. ಶಂಭುಗೌಡನ ಕೆರೆಗೆ 21 ಕೋಟಿ ರೂ. ನೀಡಲಾಗಿದೆ. ಒಂಟಿ ಪುರದಿಂದ ಚಾಕೇನಹಳ್ಳಿ ಡ್ಯಾಂಗೆ 22 ಕೋಟಿ ರೂ. ಕೊಟ್ಟಿದೆ. ಇದೆಲ್ಲಾ ಮಾಡಿ ಆರು ವರ್ಷವಾಯ್ತು, ಅಲ್ಲಿಂದ ಇಲ್ಲಿಯವರೆಗೂ ಏನೂ ಆಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾವು ರೈತರ ಪರ, ನಮ್ಮದು ರೈತ ಪರವಾದ ಸರ್ಕಾರ ಎನ್ನುತ್ತಾರೆ. ಜಿಲ್ಲಾಧಿಕಾರಿ ಅಕೌಂಟ್‌ಗೆ ದುಡ್ಡು ಬಂದರೂ ಪರಿಹಾರ ಕೊಡದೆ ಎಸ್‌ಎಲ್‌ಒ ಕಚೇರಿಗೆ ಅಲೆಸುತ್ತಿದ್ದಾರೆ ಎಂದು ಹೇಳಿದರು.
1986ರಲ್ಲೇ ಭೂಸ್ವಾಧೀನ ಮಾಡಲಾಗಿದೆ, ಆದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರದ ಹಣ ನೀಡಿಲ್ಲ, ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದೇನೆ, ನಮ್ಮ ಸ್ವಂತ ಕೆಲಸ ಮಾಡಿಕೊಡುವುದು ಬೇಡ, ನಿಮ್ಮ ಕಚೇರಿಯನ್ನುಶುದ್ಧೀಕರಣ ಮಾಡಿ, ಈ ಜಿಲ್ಲಾಧಿಕಾರಿ ಹೊಡೆತ ತಡೆಯದೆ ಕೆಲವು ಅಧಿಕಾರಿಗಳು ಸೂಸೈಡ್ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಎಂದು ದೂರಿದರು.
ಯಾರಾದರೂ ಸೂಸೈಡ್ ಮಾಡಿಕೊಂಡರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ, ಅವರು ಕೊಡುವ ಕಾಟದಿಂದ ಸೂಸೈಡ್ ಮಾಡಿಕೊಳ್ಳುವಂತಾಗಿದೆ ಎಂದು ಒಬ್ಬ ತಹಸೀಲ್ದಾರ್ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ನಾನು ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ, ಜಿಲ್ಲಾಧಿಕಾರಿಗಳು ಕೆಳಮಟ್ಟದ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದರು.