ಜಿಲ್ಲೆ

ಬದುಕಿಗೆ ಭದ್ರತೆ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ

ಮೈಸೂರು: ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಅಗತ್ಯವಿರುವ ಸುಸಜ್ಜಿತ ಭವ್ಯ ವೇದಿಕೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಬದುಕಿಗೆ ಬೇಕಾದ ಭದ್ರತೆ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ್ ಕಿಡಿಕಾರಿದರು.


ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ಸಹಯೋಗದಲ್ಲಿ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಸಮಾವೇಶದ ಎರಡನೇ ದಿನವಾದ ಸೋಮವಾರ ಅವರು ಮಾತನಾಡಿದರು.


ಈ ಕಾರ್ಯದಲ್ಲಿ ತೊಡಗಿರುವವರನ್ನು ಸಂಘಟಿತರೇ ಅಥವಾ ಅಸಂಘಟಿತ ಕಾರ್ಮಿಕರೇ ಎಂದು ಗುರುತಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರ ಫಲವಾಗಿಯೇ ವೇದಿಕೆ ನಿರ್ಮಾಣದಲ್ಲಿ ಕೈ, ಕಾಲು ಮತ್ತು ಕೆಲವು ವೇಳೆ ಪ್ರಾಣ ಕಳೆದುಕೊಂಡ ಅನೇಕ ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರವೇ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ಶಾಮಿಯಾನ ವೃತ್ತಿಯಲ್ಲಿ ತೊಡಗಿಸಿಕೊಂಡವರ ಕಷ್ಟಕಾರ್ಪಣ್ಯಗಳ ಬಗ್ಗೆ ಈವರೆಗೂ ಯಾವುದೇ ಪಕ್ಷದ ನಾಯಕರು ಸದನದಲ್ಲಿ ಧ್ವನಿ ಎತ್ತಿಲ್ಲ. ಅನೇಕ ಸಲ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗಿದೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬರೀ ಆಶ್ವಾಸನೆ ನೀಡುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಕಿಡಿಕಾರಿದರು.


ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ತಲುಪುವಂತೆ ಮಾಡಬೇಕು. ನಮ್ಮನ್ನೂ ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.


ಸಂಘದ ಸಲಹಾ ಸಮಿತಿ ಸದಸ್ಯ ಮಾಣಿಕ್‌ಚಂದ್ ಎಸ್.ಲಾಡರ್ ಮಾತನಾಡಿ, ಸ್ವಾರ್ಥಕ್ಕಾಗಿ ಕೆಲವರು ಸಂಘಟನೆಯ ಏಕತೆಯನ್ನು ಛಿದ್ರ ಮಾಡಲು ಹುನ್ನಾರ ನಡೆಸಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.


ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ನಾಯಕರು ಬಂದಿಲ್ಲ. ಇದಕ್ಕೆ ಒಗ್ಗಟ್ಟಿನ ಕೊರತೆಯೇ ಕಾರಣ ಎಂಬುದನ್ನು ಅರಿಯಬೇಕು. ಗ್ರಾಮ ಮಟ್ಟದಿಂದಲೂ ಸಂಘಟನೆ ಬೆಳೆಯಬೇಕು ಎಂದು ಹೇಳಿದರು.


ಸಂಘದ ಉಪಾಧ್ಯಕ್ಷ ಬಿ.ವಿ.ಮಹೇಶ್ವರ್, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಖಜಾಂಚಿ ಸಿ.ಎಚ್.ವಿಜಯಕುಮಾರ್, ಮುಖಂಡರಾದ ಮೆಹಬೂಬ್‌ಮುಲ್ಲಾ ಸಿದ್ದಾಪುರ್, ಗುಂಡಯ್ಯಸ್ವಾಮಿ, ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಂಶೂರ್ ರೆಹಮಾನ್ ಇನ್ನಿತರರಿದ್ದರು.