ಜಿಲ್ಲೆ

ತಳಮಟ್ಟದಲ್ಲೇ ಉಳಿದ ಕೊರಗರು, ಸರ್ಕಾರದಿಂದಲೂ ನಿರ್ಲಕ್ಷೃ

Dakshina Kannada

ಮಂಗಳೂರು: ಲಭ್ಯವಾಗದ ಕೃಷಿ ಭೂಮಿ, ಬೆಳಕು ಕಾಣದ ಮನೆಗಳು, ಶೌಚಗೃಹ, ಕುಡಿಯುವ ನೀರಿನ ಸಮಸ್ಯೆ, ಅಭಿವೃದ್ಧಿ ಮರೀಚಿಕೆಯಾಗಿರುವ ಕಾಲನಿಗಳು, ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಜನಸಂಖ್ಯೆ....ಇದು ಸಾಮಾಜಿಕ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ ಕೊರಗ ಸಮುದಾಯದ ಬದುಕಿನ ಚಿತ್ರಣ. ಸ್ವಾತಂತ್ರೃ ಪಡೆದು 75 ವರ್ಷವಾದರೂ ಆದಿವಾಸಿ ಬುಡಕಟ್ಟು ಸಮುದಾಯದ ಕೊರಗ ಜನಾಂಗದವರ ಏಳಿಗೆ ಸಾಧ್ಯವಾಗಿಲ್ಲ. ಇಂದಿಗೂ ಬಹುತೇಕ ಕಡೆ ಕಾಡಿನಿಂದ ಬಳ್ಳಿಗಳನ್ನು ತಂದು ಬುಟ್ಟಿ ಹೆಣೆದು ಅದನ್ನು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಅನಾದಿ ಕಾಲದಿಂದಲೂ ತಳಮಟ್ಟದಲ್ಲೇ ಕಷ್ಟದ ಜೀವನವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಿಗದ ಕೃಷಿ ಭೂಮಿ: ಡಾ.ಮಹಮ್ಮದ್ ಪೀರ್ ವರದಿಯ ಪ್ರಕಾರ ಸರ್ಕಾರ ಕೊರಗರಿಗೆ ಕೃಷಿ ಭೂಮಿ ಒದಗಿಸಬೇಕು. ಪ್ರಸ್ತುತ ಪ್ರತಿಯೊಂದು ಯೋಜನೆಗಳು ಕೃಷಿಭೂಮಿ ಆಧಾರಿತವಾಗಿ ಸಿಗುತ್ತಿರುವುದರಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊರಗರು ಕಾಲನಿಗಳಲ್ಲಿ 3ರಿಂದ 5 ಸೆಂಟ್ಸ್ ಜಾಗಗಳಲ್ಲಿ ವಾಸವಿದ್ದಾರೆ. ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಫಲ ಕಂಡಿಲ್ಲ. ಹಿರಿಯರ ಕಾಲದಿಂದ ವಾಸವಿರುವ ಜಾಗಕ್ಕೆ ಹಕ್ಕುಪತ್ರವೂ ಸಿಕ್ಕಿಲ್ಲ.

ತಲುಪದ ಮೂಲ ಸೌಕರ್ಯ: ಜಿಲ್ಲೆಯಲ್ಲಿರುವ ಕೊರಗರ ಕಾಲನಿಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಹಲವು ಕಡೆಗಳಲ್ಲಿ ಶೌಚಗೃಹಗಳಿಲ್ಲ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ರಸ್ತೆ ಸಂಪರ್ಕವಿಲ್ಲ. ಪರಿಸರ ಸ್ವಚ್ಛವಾಗಿಲ್ಲ. ವಿದ್ಯುತ್ ಸಂಪರ್ಕ ಆಗದೆ ಹಲವಾರು ಮನೆಗಳು ಕತ್ತಲಿನಲ್ಲಿವೆ. ಮೂಲಸೌಕರ್ಯ ಕಲ್ಪಿಸಲು ಮೂರು ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ 88 ಲಕ್ಷ ರೂ. ಬಿಡುಗಡೆಗೊಂಡಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯೂ ಕಡಿಮೆಯಾಗಿದೆ ಎಂದು ಕೊರಗ ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಶಿಕ್ಷಣ-ಉದ್ಯೋಗದಿಂದ ದೂರ: ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯವಾಗಿಲ್ಲ. ಕೆಲವೇ ಮಂದಿ ಶಿಕ್ಷಣದ ಕಡೆಗೆ ಆಸಕ್ತರಾಗುತ್ತಿದ್ದಾರೆ. ಸಮುದಾಯಕ್ಕೆ ಶಿಕ್ಷಣ ಎಂಬ ಹೊಸ ಲೋಕವನ್ನು ಕಲ್ಪಿಸಿಕೊಳ್ಳುವುದು ಇಂದಿಗೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಸರ್ಕಾರದ ನೀತಿ ಹಾಗೂ ಜನಸಾಮಾನ್ಯರ ಒತ್ತಾಯಕ್ಕೆ ಮಣಿದು ಈ ಮಕ್ಕಳು ಶಾಲೆ ಎಂಬ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬೇಕು, ಬೇಡಗಳೆಂಬ ಗೊಂದಲಗಳಿಗೆ ಸಿಲುಕಿ ಮಾಧ್ಯಮಿಕ ಹಂತದಲ್ಲೇ ಹೆಚ್ಚೆಂದರೆ ಎಸ್‌ಎಸ್‌ಎಲ್‌ಸಿ ತನಕ ಓದಿ ಡ್ರಾಪ್ ಔಟ್ ಆಗುತ್ತಿದ್ದಾರೆ.

ಶೇ.2ರಷ್ಟು ಮಂದಿ ಶಿಕ್ಷಣ ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆದವರು ಬೆರಳೆಣಿಕೆಯ ಮಂದಿ. ಆದರೆ ಅವರಿಗೂ ಉದ್ಯೋಗವಿಲ್ಲ. ಉದ್ಯಮ, ಕೃಷಿಯಲ್ಲಿ ತೊಡಗಿಸಿಕೊಂಡವರಿಲ್ಲ. 15 ಮಂದಿ ಶಾಲೆಗಳಲ್ಲಿ ಕ್ಲರ್ಕ್, ಗ್ರಾಪಂಗಳಲ್ಲಿ ಪಂಪ್ ಆಪರೇಟರ್ ಮೊದಲಾದ ಕೆಲಸ ಮಾಡುತ್ತಿದ್ದಾರೆ. ಇಬ್ಬರು ವಕೀಲರಿದ್ದಾರೆ. ಪೌರ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡವರು ಯಾರು ಇಲ್ಲ.

ಕೊರಗ ಮಕ್ಕಳಲ್ಲಿ ವಿಶೇಷವಾದ ಕಲಿಕಾ ಸಾಮರ್ಥ್ಯವಿದೆ. ಯಾವುದೇ ವಿಷಯಗಳನ್ನು ಸಮರ್ಥವಾಗಿ ಗ್ರಹಿಸುತ್ತಾರೆ. ಆದರೆ ಶಾಲೆಯಲ್ಲಿ ಅವರ ಹಾಜರಾತಿ ನಿರಂತರವಾಗಿರುವುದಿಲ್ಲ. ಆದುದರಿಂದ ಪಾಠದ ಅನುಸರಣೆ ಸಾಧ್ಯವಾಗುತ್ತಿಲ್ಲ ಎಂದು ಸಮುದಾಯದ ಮುಖಂಡ ಲಕ್ಷ್ಮಣ ವಾಮಂಜೂರು ಹೇಳುತ್ತಾರೆ.

ಕೊರಗ ಸಮುದಾಯದಲ್ಲಿ 150ರಷ್ಟು ಮಂದಿ ಪದವೀಧರರು, ಸ್ನಾತಕೋತ್ತರ ಪದವೀಧರರಿದ್ದಾರೆ. ಆದರೆ ಅವರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ನೇರ ಉದ್ಯೋಗ ಸಿಗುವಂತಾಗಬೇಕು. ಆಗ ಸಮುದಾಯದ ಇತರರಿಗೂ ಶಿಕ್ಷಣದ ಪ್ರೇರಣೆ ದೊರೆತಂತಾಗುತ್ತದೆ ಎಂದು ಸುಂದರ್ ತಿಳಿಸಿದ್ದಾರೆ.

10 ವರ್ಷದಲ್ಲಿ ಸಾವಿರ ಜನಸಂಖ್ಯೆ ಕಡಿಮೆ: ವರ್ಷದಿಂದ ವರ್ಷಕ್ಕೆ ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖಗೊಳ್ಳುತ್ತಿದ್ದು, ಪ್ರಮುಖ ಆದಿವಾಸಿ ಸಮುದಾಯ ಅಳಿವಿನಂಚಿಗೆ ಸಾಗುತ್ತಿದೆ. ಮಂಗಳೂರಿನಲ್ಲಿ 3406, ಬಂಟ್ವಾಳ 572, ಪುತ್ತೂರು 356, ಬೆಳ್ತಂಗಡಿ 383, ಸುಳ್ಯ 101 ಸಹಿತ ಒಟ್ಟು 4818 ಮಂದಿ ಕೊರಗ ಸಮುದಾಯದ ಜನರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದಾರೆ. ಕಳೆದ ವರ್ಷ ಜನವರಿಯಿಂದ ಜೂನ್ ಅವಧಿಯಲ್ಲಿ 50 ಮಂದಿ ಕೊರಗರು ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಕೇವಲ 16 ಮಕ್ಕಳ ಜನನವಾಗಿದೆ. 10 ವರ್ಷದ ಅವಧಿಯಲ್ಲಿ ಸುಮಾರು 1 ಸಾವಿರ ಜನರು ಕಡಿಮೆಯಾಗಿದ್ದಾರೆ ಎಂದು ಸಮುದಾಯದ ಮುಖಂಡ ಸುಂದರ್ ಮರಕಡ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆ: ಸಮುದಾಯದವರಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಕ್ಷಯ ಮಾಮೂಲಿ. ಉಬ್ಬಸ, ರಕ್ತದೊತ್ತಡ ಹಲವು ಮಂದಿಯಲ್ಲಿ ಕಂಡು ಬರುತ್ತಿದೆ. ಆಹಾರ ಪದ್ಧತಿ ಹಾಗೂ ಕೆಲವೊಂದು ದುಶ್ಚಟಗಳಿಂದ ಮಾರಕ ಕಾಯಿಲೆಗಳು ಬಾಧಿಸುತ್ತಿವೆ. ಅಪೌಷ್ಟಿಕತೆ ಮತ್ತು ಅಮಲು ಸೇವನೆಯ ಪರಿಣಾಮದಿಂದ ಸಣ್ಣ ಪುಟ್ಟ ಕಾಯಿಲೆಗಳು ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಸಮಗ್ರ ಗಿರಿಜನ ಕಲ್ಯಾಣಾಭಿವೃದ್ಧಿ(ಐಟಿಡಿಪಿ) ಯೋಜನೆ ಪೌಷ್ಟಿಕ ಆಹಾರದ ಪ್ಯಾಕೇಜ್‌ಗಳನ್ನು ವಿತರಿಸುತ್ತಿದೆಯಾದರೂ, ಅವು ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರುಗಳಿವೆ.

ಕೊರಗ ಸಮುದಾಯ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಗ್ರಾಮೀಣ ಭಾಗಗಳಲ್ಲಿ ಅಸ್ಪಶ್ಯತೆ ಈಗಲೂ ಕಂಡು ಬರುತ್ತಿದೆ. ಇದರಿಂದಾಗಿ ಸಮುದಾಯ ಸಮಾಜದ ಇತರರೊಂದಿಗೆ ಬೆರೆಯದೆ ಅಂತರವನ್ನು ಕಾಯ್ದುಕೊಂಡಿದೆ. ಕೀಳರಿಮೆ ಹಾಗು ಭಯದಿಂದ ದೇವಾಲಯಗಳಿಗೂ ಪ್ರವೇಶಿಸುವುದಿಲ್ಲ. ಸಮಾಜದಿಂದಲೇ ಅವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಲಕ್ಷ್ಮಣ ಮೂಡುಶೆಡ್ಡೆ, ಸಮುದಾಯದ ಮುಖಂಡ ಕೊರಗ ಸಮುದಾಯದ ಜನತೆಗೆ ವಾಸ ಮಾಡಲು ಸುಸಜ್ಜಿತ ಮನೆಗಳಿಲ್ಲ. ಕಾಲನಿಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹಗಳ ಸಮಸ್ಯೆ ಇದೆ. ಅಪೌಷ್ಟಿಕತೆಯಿಂದ ಆಗಾಗ ಕಾಡುತ್ತಿರುವ ಅನಾರೋಗ್ಯ. ಸರಿಯಾದ ಮಾಹಿತಿ ಇಲ್ಲದೆ ಸರ್ಕಾರದ ಸೌಲಭ್ಯಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಕರಿಯಣ್ಣ ವಾಮಂಜೂರು, ಸಮುದಾಯದ ಮುಖಂಡ