ಜಿಲ್ಲೆ

ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಭಿಕ್ಷಾಟನೆ ಮಾಡಿ ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಮಂಗಳವಾರ ಗಾಂಧಿ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸಿದರು.

2013 ರಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಗತ್ಯ ಜಾಗವನ್ನು ಮಂಜೂರು ಮಾಡಲಾಗಿದೆ. ಆದರೂ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾನಿರತರು ಹರಿಹಾಯ್ದರು.

ಭಿಕ್ಷಾಟನೆ ಮೂಲಕ ಸಂಗ್ರಹವಾಗಿದ್ದ 1886 ರೂ.ಗಳನ್ನು ಮುಖ್ಯಮಂತ್ರಿ ನಿಧಿಗೆ ಪೋಸ್ಟಲ್ ಆರ್ಡರ್ ಮೂಲಕ ಕಳಿಸಲಾಯಿತು ಎಂದು ಪ್ರತಿಭಟನೆ ನೇತೃತ್ವವಹಿಸಿದ್ದ ಕೆ.ಟಿ.ಶಿವಕುಮಾರ್ ಹೇಳಿದರು.

ಸಂಘಟನೆ ಪ್ರಮುಖರಾದ ವೀಣಾ ಗೌರಣ್ಣ, ಎಂ.ತಿಪ್ಪೇಸ್ವಾಮಿ, ಬಿ.ಅನಿಲ್, ಹರೀಶ್, ಧನರಾಜ್, ಓಬಳೇಶ್, ಚೌಡೇಶ್, ಎಂ.ಮಂಜುನಾಥ್, ರವಿ, ಬಿ.ಶಿವರಾಜ್, ಕರುಣಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.