ಜಿಲ್ಲೆ

ಕನಕಪುರದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು

ಕನಕಪುರ
ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಹಳ್ಳಿಯ ಗೇರಹಳ್ಳಿ ಸರ್ವೇ ನಂ.75ರಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ಉಪತಹಸೀಲ್ದಾರ್ ಮನೋಹರ್ ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಗೇರಹಳ್ಳಿಯಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಗ್ರಾಪಂ ಸದಸ್ಯ ಕುಮಾರಸ್ವಾಮಿ ಲೋಕಾಯುಕ್ತಕ್ಕೆ ನೀಡಿದ ದೂರಿನ ಮೇರೆಗೆ ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಪೋಲೀಸರ ಸರ್ಪಗಾವಲಿನಲ್ಲಿ ಕಾರ್ಯಚರಣೆ ನಡೆಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದರು. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸ್ಮಿತಾರಾಮ್ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಯಿತು.

ಆಕ್ರೋಶ

ಸರ್ಕಾರಿ ಅಧಿಕಾರಿಗಳು ಜಾಗ ತೆರವು ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಜಾಗ ಕಳೆದುಕೊಂಡ ಮಹಿಳೆ ರಾಧಮ್ಮ ನೋವು ತೋಡಿಕೊಂಡರು. ಬೊಮ್ಮನಹಳ್ಳಿ ಸರ್ವೇ ನಂ. 12/5 ನಕಾಶೆ ರಸ್ತೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ ಎಂಬುವವರು ಅಕ್ರಮವಾಗಿ ಇಟ್ಟಿಗೆ ಕಾರ್ಖಾನೆ ನಿರ್ಮಾಣ ಮಾಡಿದ್ದಾರೆ. ಆ ಸ್ಥಳದಲ್ಲಿ ತೆರವುಗೊಳಿಸಬೇಕಾದ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಸ್ಥಳದಲ್ಲಿದ್ದ ಅಧಿಕಾರಿಗಳು ದೂರು ಬಂದ ಎಲ್ಲ ಪ್ರಕರಣಗಳಲ್ಲೂ ಕ್ರಮ ಕೈಗೊಳ್ಳಲಾಗುವುದು. ಯಾರೇ ಅಕ್ರಮವಾಗಿ ಒತ್ತುವರಿ ಮಾಡಿದ್ದರೂ ತೆರವುಗೊಳಿಸುವುದಾಗಿ ಹೇಳಿ ಮಹಿಳೆಯನ್ನು ಸಮಾಧಾನಗೊಳಿಸಿದರು.

ವರದರಾಜು, ರಾಮಣ್ಣ, ರಾಜಣ್ಣ, ರಾಧಾ, ರವಿ, ಬೆಟ್ಟೆಗೌಡ ಮಾತನಾಡಿ, ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಕುಮಾರಸ್ವಾಮಿ ಅವರು ತಾವು ಹೇಳಿದ ಪಕ್ಷಕ್ಕೆ ಮತ ಚಲಾಯಿಸಿಲ್ಲ ಎನ್ನುವ ಕಾರಣಕ್ಕೆ ಗ್ರಾಮದಲ್ಲಿ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದೇ ನ್ಯಾಯ ಎನ್ನುವ ಕಾನೂನಿನಡಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.