ಅರಸೀಕೆರೆ: ಡಯಾಲಿಸಿಸ್ ಚಿಕಿತ್ಸೆಗೆ ಎದುರಾಗಿರುವ ತೊಂದರೆಯನ್ನು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ರೋಗಿಗಳು ಹಾಗೂ ಅವರ ಸಂಬಂಧಿಕರು ಶನಿವಾರ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ಸಮಾಜಸೇವಕ ಉಂಡಿಗನಾಳು ದಿನೇಶ್ ಮಾತನಾಡಿ, ಭಾಗ್ಯಗಳ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರ ಡಯಾಲಿಸಿಸ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಕಳೆದ ಮೂರ‌್ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದಾಗಿ ಹೋರಾಟದ ಹಾದಿ ಹಿಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಕ್ಷಣವೇ ವೇತನ ನೀಡುವ ಮೂಲಕ ರೋಗಿಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಚಿಕಿತ್ಸೆಗೆ ಆಗಮಿಸಿದ್ದ ಬೆಂಡೇಕೆರೆ ಉಮಾಪತಿ ಮಾತನಾಡಿ, ಡಯಾಲಿಸಿಸ್ ಮಾಡಿಸಲು ವೈದ್ಯರು ಪ್ರತಿದಿನ ಹಾಸನಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಸಕಾಲಕ್ಕೆ ವಾಹನ ದೊರೆಯದೆ ಊರು ತಲುಪಲು ಸಾಧ್ಯವಾಗುತ್ತಿಲ್ಲ. ಡಯಾಲಿಸಿಸ್ ತಾಂತ್ರಿಕ ತಜ್ಞರ ಮುಷ್ಕರದಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೌಜನ್ಯಕ್ಕೂ ನಮ್ಮ ಗೋಳು ಆಲಿಸುತ್ತಿಲ್ಲ. ಇಂತಹ ವ್ಯಕ್ತಿಗಳು ಶಾಸಕರಾಗಿ ಆಯ್ಕೆಯಾಗಿರುವುದು ಏತಕ್ಕೆ, ನಾಲ್ಕು ಬಾರಿ ಆಯ್ಕೆ ಮಾಡಿರುವ ಜನರೇ ಬುದ್ಧಿ ಕಲಿಸಬೇಕಾ. ಇಲ್ಲಿಗೆ ಬಂದಿದ್ದರೆ ಆಟವೇ ಬೇರೆಯಿತ್ತು ಎಂದು ಏರುದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವೀಣ್, ಭಾಷಾ, ಶಬರೀಶ್ ಇನ್ನಿತರರು ಹಾಜರಿದ್ದರು.