ಜಿಲ್ಲೆ

ಆರ್‌ಎಸ್‌ಎಸ್ ಸಂಘಟನೆಯನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿಲ್ಲ : ಸಿದ್ದರಾಮಯ್ಯ

ಸದೇಶ್ ಕಾರ್ಮಾಡ್

ಮೈಸೂರು: ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಸಂಘಟನೆಯನ್ನು ಟಾರ್ಗೆಟ್ ಮಾಡುತ್ತಿಲ್ಲ, ಬಿಜೆಪಿ ಈ ವಿಚಾರವಾಗಿ ವಿನಾಕಾರಣ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೆ ಯಾವುದೇ ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ. ಈ ಆದೇಶವು ಆರ್‌ಎಸ್‌ಎಸ್‌ಗೆ ಮಾತ್ರವಲ್ಲ ಎಲ್ಲ ಸಂಘಟನೆಗಳಿಗೂ ಅನ್ವಯ. ಮೊದಲಿನಿಂದಲೂ ಬಿಜೆಪಿ ಎಲ್ಲ ವಿಚಾರದಲ್ಲೂ ರಾಜಕೀಯ ಮಾಡಿಕೊಂಡು ಬರುತ್ತಿದೆ. ಬಿಜೆಪಿಯಿಂದ ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಸಾಧ್ಯವಿಲ್ಲ. ಚಿತ್ತಾಪುರದ ಗಲಾಟೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

ಮೈಸೂರಿನಲ್ಲಿ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು. ಗುತ್ತಿಗೆದಾರರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರವಾಗಿ ಅವರನ್ನು ಕರೆದು ಮಾತನಾಡುತ್ತೇನೆ ಎಂದರು.