ಬಾಗಲಕೋಟೆ: ರಾಜ್ಯದಲ್ಲಿ ರಚನೆಗೊಂಡ ನೂತನ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿರುವುದನ್ನು ತೋರಿಸಿಕೊಟ್ಟಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಬಸ್ ನಿಲ್ದಾಣ ಆವರಣದಲ್ಲಿ ಭಾನುವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗದಿಂದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳಿಂದ ಬೇರೆ ಬೇರೆ ಕಡೆ ಕೆಲಸಕ್ಕೆ ತೆರಳುವ ಮಹಿಳೆಯರು ತಮ್ಮ ದುಡಿಮೆಯಲ್ಲಿ ಬಂದ ಹಣದಲ್ಲಿ ಭಾಗಶಃ ಬಸ್ ಪ್ರಯಾಣಕ್ಕೆ ವ್ಯಯವಾಗುತ್ತಿತ್ತು. ಅದರ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಶಿಕ್ಷಣ ಪಡೆಯಲು ಧಾರವಾಡದಲ್ಲಿದ್ದಾಗ ಬಸ್‌ಗೆ ಓಡಾಡಲು ಹಣ ಇಲ್ಲದ್ದಕ್ಕೆ ರಾತ್ರಿ 11 ಗಂಟೆಗೆ ಹುಬ್ಬಳ್ಳಿಯ ಉಣಕಲ್ಲದಿಂದ ಧಾರವಾಡಕ್ಕೆ ನಡೆದುಕೊಂಡು ಹೋಗಿದ್ದರ ಬಗ್ಗೆ ಸ್ಮರಿಸಿದ ಸಚಿವರು, ಅಂದು ನನ್ನ ಸ್ಥಾನದಲ್ಲಿ ಮಹಿಳೆ ಇದ್ದರೆ ಹೇಗೆ ಎಂಬ ಆತಂಕ ನನ್ನನ್ನು ಕಾಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿ ಮಹಿಳೆಯರಿಗೆ ಒದಗಿಬರಬಾರದೆಂದು ಸರ್ಕಾರ ಅವರ ನೆರವಿಗೆ ಮುಂದಾಗಿದೆ. ದುಡಿಯುವ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಸ್ಥಿತಿವಂತ ಮಹಿಳೆಯರಿಗೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅನುಕೂಲ ಮಾಡಲಾಗಿದೆ ಎಂದರು.
ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಯೋಜನೆಯಿಂದ ತಮ್ಮ ಸಂಸ್ಥೆಗೆ ಹೊರೆಯಾಗಲಿರುವ ಎಲ್ಲ ಹಣವನ್ನು ಸರ್ಕಾರವೇ ಭರಿಸಲಿದೆ. ಈ ಯೋಜನೆಗೆ ಎಷ್ಟೇ ಖರ್ಚು ಬಂದರೂ ಸರ್ಕಾರ ನಿಭಾಯಿಸಲಿದೆ. ಸಿಬ್ಬಂದಿ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿ, ಮಾತು ಕೊಟ್ಟಂತೆ ಸರ್ಕಾರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ತಿಂಗಳೊಳಗಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೊಂದು ಮಹತ್ವದ ಯೋಜನೆಯಾಗಿದ್ದು, ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಹುಬ್ಬಳ್ಳಿಯ ವಾಕರಸಾ ಸಂಸ್ಥೆ ಮುಖ್ಯ ವ್ಯವಸ್ಥಾಪಕ ನಾರಾಯಣಪ್ಪ ಕುರಬರ ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರು ಅಂತರರಾಜ್ಯ ಪ್ರಯಾಣ, ಎಸಿ ಮತ್ತು ಐಶಾರಾಮಿ ಬಸ್ ಪ್ರಯಾಣ ಹೊರತುಪಡಿಸಿ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಶೇ.50 ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸಲಾಗಿದೆ ಎಂದರು.
ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವ ತನಕ ಆಧಾರ್ ಕಾರ್ಡ್, ಚುನಾವಣಾ ಆಯೋಗದ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿದ ಭಾರತ ಸರ್ಕಾರದ ಇಲಾಖೆ, ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸುವ ಗುರುತಿನ ಚೀಟಿ, ಅಂಗವಿಕಲರ, ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ತೋರಿಸಿ ಶೂನ್ಯ ಮೊತ್ತದ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಿ ಮಹಿಳೆಯರ ಜತೆ ಬಸ್‌ನಲ್ಲಿ ನಗರದಲ್ಲಿ ಸಂಚರಿಸಿದರು. ಮಹಿಳಾ ಪ್ರಯಾಣಿಕರಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಪ್ರಕಾಶ ಹಂಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಟಿ.ಭೂಬಾಲನ್, ಯುಕೆಪಿ ಮಹಾ ವ್ಯವಸ್ಥಾಪಕ ಭಂವರಸಿಂಗ್ ಮೀನಾ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಿತಿನ್ ಹೆಗಡೆ, ಡಿಟಿಒ ಪಿ.ವಿ.ಮೈತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.