ಮಾಗಡಿ : ಪಾಲನಹಳ್ಳಿ ಮಠದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲೂಕಿನ ಪಾಲನಹಳ್ಳಿ ಶ್ರೀಶನೇಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಚೌಡೇಶ್ವರಿ ದೇವಿಯ ದಸರಾ ಮಾತಂಗಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಮಠಕ್ಕೆ ಸಾಮಾನ್ಯ ಭಕ್ತನಂತೆ 4 ವರ್ಷದಿಂದ ಬರುತ್ತಿದ್ದೇನೆ. ಶ್ರೀಮಠ ಸಾಮಾಜಿಕ, ಧಾರ್ಮಿಕವಾಗಿ ಭಕ್ತರಿಗೆ ಶಕ್ತಿತುಂಬುತ್ತಿದೆ. ಮಠಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ಅಭಿವೃದ್ಧಿಗೊಳಿಸಬೇಕಾಗಿದೆ. ಶ್ರೀಗಳು ವಿದ್ಯಾಸಂಸ್ಥೆ ನಿರ್ಮಿಸಿ ವಿಶ್ವವಿದ್ಯಾಲಯ ಮಟ್ಟಕ್ಕೆ ಕೊಂಡೊಯ್ಯಲು, ದಾಸೋಹ ಮಂದಿರ ನಿರ್ಮಿಸುವ ಚಿಂತನೆಹೊಂದಿದ್ದಾರೆ. ಇದಕ್ಕೆ ನೆಲಮಂಗಲ ಶಾಸಕರ ನಾಯಕತ್ವದಲ್ಲಿ ಸರ್ಕಾರ ಹಾಗೂ ನಾನು ಸಹಕಾರ, ಬೆಂಬಲ ನೀಡಲಾಗುವುದು ಎಂದರು.
ಶ್ರೀಮಠ ಭಕ್ತರ ಆಕರ್ಷಣಿಯ ಸ್ಥಳವಾಗಿದ್ದು, ಶ್ರೀಗಳು ಪಂಡಿತರಾಗಿದ್ದು, ಎಲ್ಲ ಭಾಷೆಗಳಲ್ಲಿ ಪರಿಣಿತಿಹೊಂದಿದ್ದಾರೆ. ಹರಿಕಥೆ ಜತೆಗೆ ವೇದ, ಉಪನಿಷತ್ತು ಜತೆಗೆ ನಾಟಿ ವೈದ್ಯರಾಗಿ ನಿರಂತರವಾಗಿ ಸೇವೆಸಲ್ಲಿಸಿಕೊಂಡು ಬಂದಿದ್ದಾರೆ. ಅವರ ಎಲ್ಲ ಕಾರ್ಯಕ್ರಮಗಳಿಗೂ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಶಾಸಕ ಶ್ರೀನಿವಾಸ್ ಮಾತನಾಡಿ, ಶ್ರೀಮಠದ ಸಿದ್ದರಾಜು ಶ್ರೀಗಳು ಲೋಕಕಲಾಣ್ಯಾರ್ಥ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಹಲವು ಸಚಿವರು, ಶಾಸಕರು ಶ್ರೀಮಠಕ್ಕೆ ಭೇಟಿ ನೀಡಿ ಹೋದವರು, ಯಾರೂ ಸಹಕಾರ ನೀಡಲಿಲ್ಲ ಎಂದು ಶ್ರೀಗಳು ತಿಳಿಸಿದರು. ಈ ವೇಳೆ ದಾಸೋಹ ಮಂದಿರ ನಿರ್ಮಿಸುವಂತೆ ತಿಳಿಸಿದಾಗ ಕೂಡಲೇ ಸರ್ಕಾರದಿಂದ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.
ಕಾರ್ಯಕ್ರಕ್ಕೆ ಬಂದು ಭಾಷಣ ಮಾಡಿ ೆಟೋ ತೆಗೆಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದರೆ ಸಮಾಜ ಸೇವೆಯಾಗದು, ಸಮಾಜ, ಮಠಕ್ಕೆ ಸೇವೆ ಮಾಡಿ. ಅದರಂತೆ ಶ್ರೀಮಠಕ್ಕೆ ಏನು ಅಭಿವೃದ್ಧಿಯಾಗಬೇಕು ಎಂದು ನೀಲಿನಕ್ಷೆ ತಯಾರಿಸಲಾಗಿದೆ ಎಂದರು.
ಶ್ರೀಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಧಾರ್ಮಿಕತೆ ಉಳಿಸುವ ನಿಟ್ಟಿನಲ್ಲಿ ಮಾತಂಗಿ ಉತ್ಸವ ನಡೆಸಲಾಗುತ್ತಿದೆ. ಮಾನವ ಮಾನವನಾಗಿ ಬದುಕುವ ಕೆಲಸ ನಡೆಯಬೇಕು, ಅನ್ನದ ಶಕ್ತಿ ಏನೆಂದು ಮನುಷ್ಯರು ತಿಳಿದುಕೊಳ್ಳಬೇಕು, ಮನುಷ್ಯ ದುಡಿದ ಹಣ ಸಮಾಜ ಮುಖಿ ಕಾರ್ಯಗಳಿಗೆ ನೀಡಬೇಕು ಎಂದರು.
ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಂಘಟನೆಯ ಪಿ.ಮೂರ್ತಿ, ತಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಗುಡೇಮಾರನಹಳ್ಳಿ ಗ್ರಾಪಂ ಉಪಾಧ್ಯಕ್ಷ ಗೌರಮ್ಮ, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪುಷ್ಪಾ, ಮುಖಂಡ ಸಿ.ಆರ್. ಗೌಡ, ರವಿಕುಮಾರ್, ಗ್ರಾಪಂ ಸದಸ್ಯರಾದ ತಟವಾಳು ಪ್ರಕಾಶ್, ಉಮೇಶ್, ವಿಶ್ವ, ರಾಮಕೃಷ್ಣಪ್ಪ ಇತರರು ಇದ್ದರು.