ಜಿಲ್ಲೆ

ಅರಣ್ಯವಾಸಿಗಳ ಹಿತ ಕಾಪಾಡಲು ಸರ್ಕಾರ ಬದ್ಧ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಜರುಗಿಸಲು ಕಾನೂನು ಇಲಾಖೆ ಚಿಂತಿಸಿದೆ. ಅಲ್ಲದೆ, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಸುಪ್ರಿಂ ಕೋರ್ಟ್‌ನಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ಕಾನೂನು ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾದ ನಿಯೋಗಕ್ಕೆ ಅವರು ತಿಳಿಸಿದರು. ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಅರಣ್ಯ, ಸಮಾಜ ಕಲ್ಯಾಣ, ಬುಡಕಟ್ಟು ಮತ್ತು ಕಾನೂನು ಇಲಾಖೆಯ ಒಳಗೊಂಡು ಉನ್ನತ ಮಟ್ಟದ ಸಭೆ ಜರುಗಿಸಿ, ಅರಣ್ಯವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಚಿಂತಿಸುತ್ತಿದೆ. ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಭಿತವಾಗಿರುವ ಅರಣ್ಯ ವಾಸಿಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ರವೀಂದ್ರ ನಾಯ್ಕ ನೇತೃತ್ವದದ ನಿಯೋಗದಲ್ಲಿ ಹಿರಿಯ ಹೋರಾಟಗಾರ ಜಿ.ಎಂ. ಶೆಟ್ಟಿ ಅಂಕೋಲಾ, ಬಾಲಚಂದ್ರ ಶೆಟ್ಟಿ ಅಚಿವೆ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸುನೀಲ ನಾಯ್ಕ ಸಂಪಖಂಡ, ಯಲ್ಲಾಪುರ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ನಾಗರಾಜ ಮರಾಠಿ, ದಿನೇಶ ನಾಯ್ಕ ಬೇಡ್ಕಣಿ ಇದ್ದರು.