ಬೆಳಗಾವಿ: ಸರ್ಕಾರ ಹಾಗೂ ಕೈಗಾರಿಕೆಗಳ ಮಧ್ಯೆ ಕಾನ್ಫಿಡಿರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸೇತುವೆಯಾಗಿ ಕೆಲಸ ಮಾಡಲಿದೆ. ಕೈಗಾರಿಕೋದ್ಯಮಿಗಳ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸಲಿದೆ ಎಂದು ಸಿಐಐ ರಾಜ್ಯ ಘಟಕದ ಉಪಾಧ್ಯಕ್ಷ ಸಂದೀಪ್ ಸಿಂಗ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಿಐಐ ಬೆಳಗಾವಿ ಘಟಕ ಉದ್ಘಾಟಿಸಿ ಮಾತನಾಡಿದರು. ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿ ನಗರ ಈಗ ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಅವಕಾಶಗಳು ಇಲ್ಲಿವೆ. ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಯುವಕ-ಯುವತಿಯರು ಉದ್ಯೋಗಕ್ಕಾಗಿ ಬೇರೆಡೆ ತೆರಳುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಸ್ಥಳೀಯ ಮಟ್ಟದಲ್ಲೇ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸ ಬೇಕಾದ ಅಗತ್ಯವಿದೆ. ಈ ಸಂಬಂಧ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ವೋಲ್ವೋ ಕನ್‌ಸ್ಟ್ರಕ್ಷನ್ ಇಕ್ವಿಪ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಬಿ.ಇಂದುಶೇಖರ ಮಾತನಾಡಿ, ಇಂದು ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಇದಕ್ಕೆ ತಕ್ಕಂತೆ ಹೊಂದಿಕೊಳ್ಳಲು ಕೈಗಾರಿಕೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದರು. ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ರಾವ್ ಅವರು ‘ ಜಾಗತಿಕ ಉತ್ಪಾದನೆ; ಸವಾಲು ಮತ್ತು ಅವಕಾಶಗಳು’ ಕುರಿತು, ಹಿರಿಯ ಹಣಕಾಸು ವಿಶ್ಲೇಷಕ ಎಂ.ಕೆ.ಕೃಷ್ಣ ‘ಬಜೆಟ್-2020 ವ್ಯವಹಾರಿಕ ಪರಿಣಾಮಗಳು’ ಕುರಿತು ಮತ್ತು ಲಿಮ್ಕರ ರಿಟೇಲ್ ಇಂಡಸ್ಟ್ರಿ ಇಂಡಿಯಾ ನಿರ್ದೇಶಕಿ ಸಿರಿಶಾ ಲಿಮ್ಕರ್ ‘ಎರಡನೇ ತಲೆಮಾರಿನ ವ್ಯವಹಾರ’ ಕುರಿತು ಉಪನ್ಯಾಸ ನೀಡಿದರು. ಸಿಐಐ ಬೆಳಗಾವಿ ಘಟಕದ ಅಧ್ಯಕ್ಷರಾಗಿ ಜಯಂತ ಹುಂಬರವಾಡಿ, ಉಪಾಧ್ಯಕ್ಷರಾಗಿ ದಿಲೀಪ ಚಂಡಕ್ ಹಾಗೂ ಕಾರ್ಯದರ್ಶಿಯಾಗಿ ಆನಂದ ತಾವರೆ ಆಯ್ಕೆಯಾದರು.