ಮುದ್ದೇಬಿಹಾಳ ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ತಾಲೂಕು ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮನಾಳ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

ಮುದ್ದೇಬಿಹಾಳ: ಪಟ್ಟಣದಲ್ಲಿರುವ ವಿವಿಧ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಸಂಬಂಧಿಸಿದ ವಾರ್ಡನ್‌ಗಳು ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಕೆಲವೆಡೆ ಕಾಟ್ ಮತ್ತು ಬೆಡ್ ಬೇಡಿಕೆ ಕೇಳಿಬಂದಿದ್ದು, ವರದಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಮುದ್ದೇಬಿಹಾಳ ತಾಲೂಕು ಉಸ್ತುವಾರಿ ನೋಡಲ್ ಅಧಿಕಾರಿ- ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ಪಟ್ಟಣದಲ್ಲಿರುವ ವಿವಿಧ ಸರ್ಕಾರಿ ಹಾಸ್ಟೆಲ್ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ವಿದ್ಯಾರ್ಥಿಗಳಿಂದ ಬೇಡಿಕೆ ಸ್ವೀಕರಿಸಿ ನಂತರ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು.

ಅಲ್ಲಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂತು. ಕೆಲವೆಡೆ ಶೌಚಾಲಯಗಳಿಗೆ ನೀರಿನ ಸಮಸ್ಯೆ ಇದೆ. ಒಂದೆರಡು ಹಾಸ್ಟೇಲ್‌ಗಳಲ್ಲಿ ಸೋಲಾರ್ ಸೌಲಭ್ಯ ಇಲ್ಲದ್ದರಿಂದ ಸ್ನಾನಕ್ಕೆ ಬಿಸಿ ನೀರು ಸಿಗುತ್ತಿಲ್ಲ. ಹೊಸ ಹಾಸ್ಟೇಲ್‌ಗಳಲ್ಲಿ ಕಾಟ್ ಮತ್ತು ಬೆಡ್‌ಗಳ ಕೊರತೆ ಇದ್ದು ವಿದ್ಯಾರ್ಥಿಗಳು ನೆಲದ ಮೇಲೆ ಮಲಗುತ್ತಿದ್ದಾರೆ. ಆಹಾರ ವಿಷಯಕ್ಕೆ ಸಂಬಂಧಿಸಿ ಮೆನು ಪ್ರಕಾರವೇ ಗುಣಮಟ್ಟದ ಆಹಾರ ನೀಡುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೆಲವೆಡೆ ವಿದ್ಯಾರ್ಥಿಗಳ ಸಾಮೂಹಿಕ ಬೇಡಿಕೆಗನುಗುಣವಾಗಿ ಆಹಾರದ ಮೆನು ಬದಲಾಯಿಸಲಾಗುತ್ತಿದೆ ಎನ್ನುವುದು ಭೇಟಿಯಲ್ಲಿ ತಿಳಿದು ಬಂದಿದೆ ಎಂದರು.

ವಿದ್ಯಾರ್ಥಿಗಳಿಂದ ಕೇಳಿಬಂದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳು, ಆಯಾ ಹಾಸ್ಟೆಲ್‌ಗಳ ವಾರ್ಡನ್‌ಗಳಿಗೆ ಸೂಚಿಸಿದ್ದೇನೆ. ಭೇಟಿ ಮತ್ತು ಪರಿಶೀಲನೆ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಬಿಸಿಎಂ ಅಧಿಕಾರಿ ಶಿವಲೀಲಾ ಕೊಣ್ಣೂರ, ಆಯಾ ಹಾಸ್ಟೆಲ್‌ಗಳ ವಾರ್ಡನ್‌ಗಳು ಹಾಜರಿದ್ದು ಅಗತ್ಯ ಮಾಹಿತಿ ನೀಡಿದರು.