ದೇವದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಹಲವು ದೂರುಗಳು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ವರದಿ ನೀಡಲಾಗುವುದು. ಇಲ್ಲಿ ನಡೆದ ಎಲ್ಲ ಅವಘಡಗಳ ಬಗ್ಗೆ ಕ್ರಮವಹಿಸುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಆರೋಗ್ಯ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ಆಯುಕ್ತ ಶಂಕ್ರಪ್ಪ ಮೈಲಾರ ಹೇಳಿದರು.
ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಗಸ್ಟ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ರಕ್ತ ಪರೀಕ್ಷೆ ಮಾಡುವ ಯಂತ್ರಗಳು ಸೇರಿ ಪೀಠೋಪಕರಣಗಳು ಕಳ್ಳತನವಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ತನಿಖಾ ಹಂತದಲ್ಲಿದೆ. ಆಸ್ಪತ್ರೆ ಆತಂರಿಕ ತನಿಖೆಗೆ ಆಯುಕ್ತರು ನನಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಆಸ್ಪತ್ರೆ ಬಗ್ಗೆ ಹಲವು ದೂರು ಬಂದಿದ್ದು ಪರಿಶೀಲಿಸಲು ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಉಳಿದ ಚಿಕಿತ್ಸೆ ಸರ್ಕಾರ ನಿಗದಿ ಮಾಡಿದ ಶುಲ್ಕವಿದೆ. ಆದರೆ, ಚಿಕಿತ್ಸೆಗೆ ಹಣ ಪಡೆಯುವ ಬಗ್ಗೆ ದೂರು ಬಂದಿದ್ದು ಈಗಾಗಲೇ ಕೆಳಹಂತದಲ್ಲಿ ದೂರು, ಪತ್ರವ್ಯವಹಾರ ನಡೆದಿದೆ. ಎಲ್ಲ ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗುವುದು. ಬಾಣಂತಿಯರು ಮೃತಪಟ್ಟ ಬಗ್ಗೆ ಸರ್ಕಾರದಿಂದ ಪರಿಹಾರದ ಬಗ್ಗೆ ಆದೇಶ ಬಂದಿಲ್ಲ. ಬಾಣಂತಿ ಹಾಗೂ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿವಹಿಸಲಾಗುವುದು. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿರುವ ಬಗ್ಗೆ ವರದಿ ಸಲ್ಲಿಸಲಾಗುವುದು.
ವೈದ್ಯರು ಕಡ್ಡಾಯವಾಗಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಆಸ್ಪತ್ರೆಯಲ್ಲಿ ಇರಲೇಬೇಕು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬಗ್ಗೆ ವರದಿ ಪಡೆಯಲಾಗಿದೆ. ನಿಯಮ ಉಲ್ಲಂಘಿಸಿದವರು, ಕರ್ತವ್ಯ ಲೋಪ ಮಾಡುವವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್ವರ, ವೈದ್ಯಾಧಿಕಾರಿ ಡಾ.ಶಿವಾನಂದ ಇತರರಿದ್ದರು.