ಚಿಕ್ಕಮಗಳೂರು: ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡಬೇಕೆಂದು ಒತ್ತಾಯಿಸಲು ಒಗ್ಗಟ್ಟು ಪ್ರದರ್ಶನ ಅಗತ್ಯ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗಿನ ಸಂವಾದದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಎಲ್ಲ ಜಿಲ್ಲಾ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಕ್ಯಾಂಟೀನ್(ದಿನಬಳಕೆ ವಸ್ತುಗಳು) ತೆರೆಯಲಾಗಿದೆ. ಜಿಲ್ಲೆಯಲ್ಲಿ ನೌಕರರ ಭವನ ನಿರ್ಮಾಣ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರ್ಚಚಿಸಲಾಗಿದ್ದು, ಜಾಗ ಗುರುತಿಸಿದಲ್ಲಿ 2 ಕೋಟಿ ರೂ. ವೆಚ್ಚದ ಭವನ ನಿರ್ವಣವಾಗುವುದೆಂಬ ಭರವಸೆ ನೀಡಿದ್ದಾರೆ ಎಂದರು.
ಶಿಕ್ಷಕರ ದಿನಾಚರಣೆ ಮಾದರಿಯಲ್ಲಿ ಸರ್ಕಾರಿ ನೌಕರರ ದಿನವನ್ನು ಆಚರಿಸುವ ಮೂಲಕ ಪ್ರತಿವರ್ಷ ಮೇ 7ರಂದು ಶಿಕ್ಷಕರಿಗೆ ಸವೋತ್ತಮ ಪ್ರಶಸ್ತಿ ನೀಡಬೇಕು. ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಿಕ್ಷಕರನ್ನು ಗೌರವಿಸುವಂತೆ ಉಪನ್ಯಾಸಕರ ದಿನವನ್ನು ಆಚರಿಸಿ ಅವರನ್ನೂ ಗೌರವಿಸಲಾಗುವುದು ಎಂದು ತಿಳಿಸಿದರು.
5 ಲಕ್ಷ ರೂ. ಅನುದಾನದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಶಾಲೆಗಳಲ್ಲಿ ಎಸ್ಡಿಎಂಸಿ, ಮುಂಬಡ್ತಿ ಸೇರಿ ಯಾವುದೆ ಇಲಾಖೆಗಳಿಗೆ ತೊಂದರೆಯಾದಲ್ಲಿ ಜಿಲ್ಲಾಡಳಿತವೇ ಕ್ರಮ ಜರುಗಿಸುವಂತೆ ಮಾಡಲಾಗಿದೆ. ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತೆ ಸೇರಿ ಇಲಾಖೆ ಪರೀಕ್ಷೆಗಳ ಮೂಲಕ ಬಡ್ತಿ ನೀಡುವ ಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂದರು.
ಕರೊನಾದಿಂದ ಮೃತಪಟ್ಟ ಸರ್ಕಾರಿ ನೌಕರರಿಗೆ 30 ಲಕ್ಷ ರೂ. ವಿಮೆ ಪರಿಹಾರ, ಡಯಾಲಿಸಿಸ್ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ವೈದ್ಯರ ಸಲಹೆ ಸೂಚನೆಯಂತೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಸಂಘದ ರಾಜ್ಯ ಕಾರ್ಯದರ್ಶಿ ಜಗದೀಶ್ ಗೌಡ ಪಾಟೀಲ್, ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಜಿಲ್ಲಾಧ್ಯಕ್ಷ ದೇವೇಂದ್ರ, ಕಾರ್ಯದರ್ಶಿ ಸತ್ಯನಾರಾಯಣ, ರಾಜ್ಯ ಪರಿಷತ್ ಸದಸ್ಯ ಪೂರ್ಣೆಶ್, ಪದ್ಮರಾಜ್ ಇತರರಿದ್ದರು.