ಚಿಕ್ಕಮಗಳೂರು: ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ಚಾಕಚಕ್ಯತೆ, ಸ್ಪೋಟಕ ಪತ್ತೆ ಕಾರ್ಯಾಚರಣೆಯಲ್ಲಿ ಬದ್ಧತೆ ಪ್ರದರ್ಶಿಸುತ್ತಿದ್ದ ಜಾಣ ಶ್ವಾನ ಹನಿ (13) ವಯೋಸಹಜ ಅಸ್ವಸ್ಥತೆಯಿಂದ ಭಾನುವಾರ ಬೆಳಗಿನ ಜಾವ ಮೃತಪಟ್ಟಿತು.
ನಗರದ ರಾಮನಹಳ್ಳಿ ಪೊಲೀಸ್ ಕವಾಯತು ಮೈದಾನದ ಹುತಾತ್ಮರ ಸ್ಮಾರಕದ ಸಮೀಪದಲ್ಲೇ ಭಾನುವಾರ ಬೆಳಗ್ಗೆ ಗಾಳಿಯಲ್ಲಿ ಮೂರು ಸುತ್ತು ಕುಶಲ ತೋಪುಗಳನ್ನು ಸಿಡಿಸುವ ಮೂಲಕ ಹನಿಗೆ ಇಲಾಖೆಯ ಗೌರವ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಎಸ್ಪಿ ಹರೀಶ್ ಪಾಂಡೆ, ಎಎಸ್ಪಿ ಎನ್.ಎಸ್.ಶ್ರುತಿ ಹಾಗೂ ಸಿಬ್ಬಂದಿ ಶ್ವಾನಕ್ಕೆ ಅಂತಿಮ ಗೌರವ ಸಲ್ಲಿಸಿದರು.
ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಹನಿ 2008ರಲ್ಲಿ ಜನಿಸಿದ್ದು, ಬೆಂಗಳೂರು ಕೋರಮಂಗಲದ ಆಡುಗೋಡಿ ಪೊಲೀಸ್ ಹ್ಯಾಂಡ್ಲರ್ ಬಳಿ ಸ್ಪೋಟಕ ಪತ್ತೆಯಲ್ಲಿ ಒಂಬತ್ತು ತಿಂಗಳು ತರಬೇತಿ ಪಡೆದು ಚಿಕ್ಕಮಗಳೂರು ಶ್ವಾನದಳಕ್ಕೆ ಸೇರ್ಪಡೆಗೊಂಡಿತ್ತು. ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ಕಾನ್ಸ್ಟೇಬಲ್ಗಳಾದ ಎ.ಸಿ.ರೇವಣ್ಣ ಮತ್ತು ವಿ.ಕೆ.ಲೋಕೇಶಪ್ಪ ಹ್ಯಾಂಡ್ಲರ್ಗಳಾಗಿ ಕಾರ್ಯ ನಿರ್ವಹಿಸಿದ್ದರು.
ಎರಡು ಬಾರಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ರಕ್ಷಣಾ ಕಾರ್ಯದಲ್ಲಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದ ಹನಿ, ಜಿಲ್ಲೆಯಲ್ಲಿ ನಕ್ಸಲ್ ಉಪಟಳ ತೀವ್ರವಾಗಿದ್ದ ಸಂದರ್ಭದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರ ಜತೆ ಪಾಲ್ಗೊಂಡಿದ್ದು, ಉಪಯುಕ್ತ ನೆರವು ನೀಡಿತ್ತು. ಜತೆಗೆ ಅತಿಗಣ್ಯ ವ್ಯಕ್ತಿಗಳ ಪ್ರವಾಸ ಕಾರ್ಯಕ್ರಮದ ವೇಳೆ, ಪ್ರಮುಖ ರಕ್ಷಣಾ ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸಿತ್ತು.
ಎರಡು ಚಿನ್ನದ ಪದಕ: ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದ್ದ ಹನಿ, ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಎರಡು ಬಾರಿ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಚಿನ್ನದ ಪದಕ ಹಾಗೂ ಒಮ್ಮೆ ಬೆಳ್ಳಿ ಪದಕ ಗಳಿಸಿತ್ತು. 2001-12ರಲ್ಲಿ ಅಖಿಲ ಭಾರತ ರಾಜ್ಯಮಟ್ಟದ ಪೊಲೀಸ್ ಕರ್ತವ್ಯಕೂಟಕ್ಕೆ ಆಯ್ಕೆಯಾಗಿತ್ತು.