ಶಿವಮೊಗ್ಗ: ರೈತರ ವಿಚಾರದಲ್ಲಿ ಸರ್ಕಾರ, ಮಂತ್ರಿಗಳ ಹೇಳಿಕೆ ಗಮನಿಸಿದರೆ ಅವರಿಗೆ ರೈತರ ಬಗ್ಗೆ ಬದ್ಧತೆ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ ಬರ ಇದ್ದರೂ ಮಂತ್ರಿಗಳಿಗೆ ಹೊಸ ಕಾರು ಖರೀದಿ ಮಾಡಲು ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಪೀಡಿತ ತಾಲೂಕುಗಳ ಘೋಷಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ 15 ದಿನಗಳ ಹಿಂದೆಯೇ ಹೇಳಿದ್ದರು. ಆದರೆ ಘೋಷಣೆ ಮಾಡಿ ಪದೇ ಪದೇ ಮುಂದೂಡುತ್ತಿದ್ದಾರೆ. ಇದು ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಳಕಳಿ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಪರಿಹಾರ ಹೆಚ್ಚು ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬ ಕೃಷಿ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಸಿದ ಅವರು, ನನ್ನ ಬಗ್ಗೆಯೂ ಟೀಕೆ ಮಾಡಿದ್ದಾರೆ. ಮೊದಲ ಬಾರಿ-ಎರಡನೇ ಬಾರಿ ಶಾಸಕ ಎಂಬ ಪ್ರಶ್ನೆ ಇಲ್ಲ. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಆ ರೀತಿ ನಡೆದುಕೊಳ್ಳುತ್ತಿಲ್ಲ. ಸಿಎಂ ಮತ್ತು ಸರ್ಕಾರ ಗ್ಯಾರಂಟಿ ಜಾತ್ರೆಯಲ್ಲೇ ಮುಳುಗಿ ಹೋಗಿದೆ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಪರಿಸ್ಥಿತಿಗೆ ಸರ್ಕಾರ ಬಂದು ನಿಂತಿದೆ. ಇದಕ್ಕೆ ಜನರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಕಾಂಗ್ರೆಸ್‌ಗೆ ನೀಡಲಿದಾರೆ ಎಂದರು.