ಜಿಲ್ಲೆ

ಸರ್ಕಾರದ ಮುಂದಿದೆ ಹಾಲಿನ ದರ ಹೆಚ್ಚಳ ಪ್ರಸ್ತಾಪ: ಸಚಿವ ಕೆ.ವೆಂಕೆಟೇಶ್​ ಹೇಳಿಕೆ

ಬೆಂಗಳೂರು:ಹಾಲಿನ ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ಮುಂದೆ ಸಲ್ಲಿಕೆಯಾಗಿರುವ ಪ್ರಸ್ತಾಪವನ್ನು ಪರಿಗಣಿಸಿ ಮುಂದಿನ ಜೂನ್​ದೊಳಗೆ ದರ ಏರಿಕೆ ಮಾಡುವುದಾಗಿ ಪಶುಸಂಗೋಪನಾ ಸಚಿವ ಕೆ. ವೆಂಕೆಟೇಶ್​ ಹೇಳಿದ್ದಾರೆ.

ಭಾರತೀಯ ಡೇರಿ ಸಂಘ(ಐಡಿಎ) ನಗರದ ನಿಮ್ಹಾನ್ಸ್​ ಕನ್ವೆನ್ಶನ್​ ಸೆಂಟರ್​ನಲ್ಲಿ ಆಯೋಜಿಸಿದ "ದಕ್ಷಿಣ ಭಾರತ ಡೇರಿ ಶೃಂಗಸಭೆ'ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹೈನುಗಾರಿಕೆ ಮೇಲೆ ಲಕ್ಷಾಂತರ ರೈತರು ಅವಲಂಬಿತರಾಗಿದ್ದಾರೆ. ರೈತರಿಗೆ ಕೃಷಿ ಎಷ್ಟು ಮುಖ್ಯವೋ, ಅಷ್ಟೇ ಹೈನುಗಾರಿಕೆಯೂ ಮುಖ್ಯವಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಎಷ್ಟು ದರ ಏರಿಕೆ ಮಾಡಬೇಕೆಂಬ ಕುರಿತು ಚರ್ಚೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಒಕ್ಕೂಟದ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ರಾಜ್ಯದಲ್ಲಿ 16 ಹಾಲಿನ ಒಕ್ಕೂಟಗಳಿವೆ. ಪ್ರತಿ ವರ್ಷ 1 ಕೋಟಿ ಲೀಟರ್​ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಮಾರಾಟವಾಗಿ ಉಳಿದ ಹಾಲು ಉತ್ಪನ್ನಗಳಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಉತ್ಪನ್ನಗಳ ಮಾರಾಟದಿಂದ ಬರುವ ಹಣ ವಿಳಂಬದಿಂದ ಕೈ ಸೇರುವುದರಿಂದ ರೈತರಿಗೆ ಹಣ ಪಾವತಿಸುವಲ್ಲಿ ತುಸು ತಡವಾಗುತ್ತಿದೆ. ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಗುಜರಾತ್​, ಕರ್ನಾಟಕ ಮುಂಚೂಣಿಯಲ್ಲಿದೆ. ಹಾಲು ಉತ್ಪಾದಕ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಪೈಪೋಟಿ ಎದುರಾಗುತ್ತಿದೆ ಎಂದು ಸಚಿವರು ಹೇಳಿದರು.

ಹೈನುಗಾರಿಕಾ ಪ್ರಶಸ್ತಿ ಪ್ರದಾನ

ಹೈನುಗಾರಿಕೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಕರ್ನಾಟಕದ ಮಂಡ್ಯ ಜಿಲ್ಲೆಯ ಡಿಂಕ ಗ್ರಾಮದ ಮಂಗಳಮ್ಮ, ಕೇರಳದ ಕೊಟ್ಟಾಯಂ ಜಿಲ್ಲೆಯ ಮುಟ್ಟುಚಿರಾ ಗ್ರಾಮದ ವಿಧು ರಾಜೀವ್​, ತೆಲಂಗಾಣದ ಜಗಿತ್ಯೆಲ್ಲಾ ಗ್ರಾಮಾಂತರ ಜಿಲ್ಲೆಯ ಸಂಗಟಪಲ್ಲಿ ಗ್ರಾಮದ ಪುಢಾರಿ ಗಂಗವ್ವ, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದ್ದಿರಾಳ ಗ್ರಾಮದ ನವೀನ ಕುಮಾರಿ ಹಾಗೂ ತಮಿಳುನಾಡಿನ ತಿರುಪುರ್​ ಜಿಲ್ಲೆಯ ಕೊಡಗಿಪಾಳ್ಯಂ ಗ್ರಾಮದ ಸೆಲ್ವನಾಯಕಿ ಅವರಿಗೆ ಮಹಿಳಾ ಹೈನುಗಾರಿಕಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆಎಂಎಫ್​ ಅಧ್ಯಕ್ಷ ಭೀಮ್​ ನಾಯ್ಕ್​ ಎಂಡಿ ಬಿ.ಶಿವಸ್ವಾಮಿ, ಸೇರಿ ಸಂದ ಪದಾಧಿಕಾರಿಗಳು ಮತ್ತಿತರರಿದ್ದರು.

ಹಲವು ವಿಚಾರ ವಿನಿಮಯ

ಶೃಂಗಸಭೆಯಲ್ಲಿ 30 ಡೇರಿ ಉದ್ದಿಮೆಗಳ ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶೃಂಗಸಭೆಯಲ್ಲಿ ಹೈನುಗಾರಿಕೆ ಕ್ಷೇತ್ರದ ವಿವಿಧ ಪಾಲುದಾರರಾದ ರೈತರು, ಹೈನುಗಾರರು, ಸಂಶೋಧಕರು, ಶಿಣತರು, ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿಪರರು, ಮತ್ತು ಡೇರಿ ಉದ್ಯಮದ ಮುಖ್ಯಸ್ಥರು ಉದ್ಯಮದ ಬಗ್ಗೆ ವಿಚಾರ ಮಂಡಿಸಲಾಯಿತು. ಹೈನುಗಾರಿಕೆ ಕ್ಷೇತ್ರದ 30 ತರು ಸುಸ್ಥಿರ ಹಾಲು ಉತ್ಪಾದನೆ, ಉದ್ಯಮದ ಎದುರಿಸುತ್ತಿರುವ ಸವಾಲು&ಅವಕಾಶ ಮತ್ತು ಮೌಲ್ಯವರ್ಧನೆ, ಸಾಂಪ್ರದಾಯಿಕ ಡೇರಿ ಉತ್ಪನ್ನಗಳು&ವಿಾನ ಮತ್ತು ಮಾನದಂಡ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಯಿತು.

ಹಾಲಿನ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್​ಟಿ ಕಡಿಮೆಗೊಳಿಸುವುದು, ಸಬ್ಸಿಡಿ ಆಧಾರದಲ್ಲಿ ರೈತರಿಗೆ, ಡೇರಿ ಉದ್ದಿಮೆಗಳಿಗೆ ಸಾಲ ನೀಡುವ ವ್ಯವಸ್ಥೆ ಕಲ್ಪಿಸುವುದು, ರೈತ ಕುಟುಂಬಗಳನ್ನು ಆದಾಯ ತೆರಿಗೆಯಿಂದ ಹೊರಗಿಡುವುದು, ವಿದೇಶಗಳಿಂದ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಂತೆ ಸೇರಿ 7 ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂಬರುವ ಬಜೆಟ್​ನಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ.

| ಡಾ.ಸತೀಶ್​ ಕುಲಕರ್ಣಿ, ಐಡಿಎ ದಕ್ಷಿಣ ವಲಯದ ಅಧ್ಯಕ್ಷ.