ಜಿಲ್ಲೆ

ಸರ್ಕಾರದ ಅನುದಾನ ಕಾಗದಕ್ಕಷ್ಟೇ ಸೀಮಿತ

ಎನ್.ವೆಂಕಟೇಶ್

ಚಿಂತಾಮಣಿ ನಗರಸಭೆ ಆಡಳಿತ - ವಿಪಕ್ಷ ಸದಸ್ಯರ ಆರೋಪ - ಪ್ರತ್ಯಾರೋಪ

ಚಿಂತಾಮಣಿ: ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆ ಕೇವಲ ತೋರ್ಪಡಿಕೆಯಾಗಿದೆ. ಅನುದಾನಗಳು ಕೇವಲ ಕಾಗದ ಪತ್ರಗಳಿಗಷ್ಟೇ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಿರೋಧ ಪಕ್ಷ ಜೆಡಿಎಸ್ ಸದಸ್ಯರು ದೂರಿದರು.

ಸಾಮಾನ್ಯಸಭೆ ನಂತರ ನಗರಸಭೆ ಎದುರು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ಸದಸ್ಯರಾದ ದೇವಳಂ ಶಂಕರ್, ನಟರಾಜ್, ಮಂಜುಳಾ ಮಧು, ರುಬಿಯಾ ಸುಲ್ತಾನ್ ಮುರಳಿ, ಮಂಜುನಾಥ್ ಮತ್ತು ಜಯಮ್ಮ, ಸಾಮಾನ್ಯಸಭೆ ಕರೆದಿರುವುದು ಕಾಟಾಚಾರಕ್ಕೆ ಮತ್ತು ತೋರ್ಪಡಿಕೆ ಮಾತ್ರ. ಕೊಳವೆಬಾವಿ, ಹಳೆಯ ಪಂಪು ಮತ್ತು ಮೋಟಾರ್‌ಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಗರಸಭೆಯಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಮತ್ತೊಂದು ಸಭೆ ಕರೆದು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಬೋಗಸ್ ಬಿಲ್: ನಗರದಲ್ಲಿ ಕಟ್ಟಡ ಮಾಲೀಕರಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದು, ಬೋಗಸ್ ಬಿಲ್ ನೀಡುತ್ತಿರುವುದು, ಐಎಸ್‌ಡಿಎಂಸಿ ಮಾರುಕಟ್ಟೆಯ ಬಾಡಿಗೆ ಲೆಕ್ಕ ಇಲ್ಲದೆ ಇರುವುದು, ಮನೆ ತೆರಿಗೆ, ಮೊಬೈಲ್ ಟವರ್‌ಗಳಿಂದ ಕಂದಾಯ ಸಂಗ್ರಹದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯರು ದೂರಿದರು.

ಇ-ಖಾತೆಗೆ ಮಧ್ಯವರ್ತಿ ಹಾವಳಿ

ಇ-ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಒಂದು ಖಾತೆ ಬದಲಾವಣೆಗೆ 25ರಿಂದ 1 ಲಕ್ಷ ರೂ. ಬೇಡಿಕೆ ಇಡುತ್ತಾರೆ. ನಗರಸಭೆಯ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ನೋಡಿದರೆ ಸಾಕ್ಷಿ ಸಿಗುತ್ತದೆ ಎಂದರು. ಹೊಸದಾಗಿ ಇ-ಖಾತೆ ಮಾಡದಿರುವುದರಿಂದ ಜನತೆಗೆ ಸಾಲ ಪಡೆಯಲು, ಆಸ್ತಿಗಳನ್ನು ಮಾರಲು ಸಾಧ್ಯವಾಗುತ್ತಿಲ್ಲ. ಹಲವೆಡೆ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ನಗರಸಭೆ ಆಡಳಿತ ಚಕಾರ ಎತ್ತುತ್ತಿಲ್ಲ. ಸಾಮಾನ್ಯಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಿದ್ದರೆ ಸದಸ್ಯರ ಕಷ್ಟ ಅರ್ಥವಾಗುತ್ತಿತ್ತು ಎಂದು ಜೆಡಿಎಸ್ ಸದಸ್ಯರು ಹೇಳಿದರು.

ವಿರೋಧ ಪಕ್ಷಕ್ಕೆ ಅಭಿವೃದ್ಧಿ ಬೇಕಿಲ್ಲಚಿಂತಾಮಣಿ: ನಗರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದಿಂದ ಕೋಟ್ಯಂತರ ರೂ. ಅನುದಾನವನ್ನು ಮಂಜೂರು ಮಾಡಿಸಿದ್ದಾರೆ. ಆದರೆ ವಿಪಕ್ಷ ಸದಸ್ಯರು ಕ್ಷುಲ್ಲಕ ವಿಚಾರಗಳನ್ನು ಪ್ರಶ್ನಿಸುವ ಮೂಲಕ ಸಾಮಾನ್ಯಸಭೆ ಬಹುತೇಕ ಸಮಯವನ್ನು ಹಾಳು ಮಾಡಿದರು ಎಂದು ನಗರಸಭೆ ಆಡಳಿತಾರೂಢ ಪಕ್ಷದ ಸದಸ್ಯರು ದೂರಿದರು.

ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್, ವಿಪಕ್ಷ ಸದಸ್ಯರು ಸ್ವಾರ್ಥಕ್ಕಾಗಿ ಸಾಮಾನ್ಯಸಭೆಯಲ್ಲಿ ಅನಾವಶ್ಯಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಗದ್ದಲ ಎಬ್ಬಿಸಿದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದನ್ನೇ ಇಟ್ಟುಕೊಂಡು ದೊಡ್ಡ ರಾದ್ದಾಂತ ಮಾಡಿದರು ಎಂದರು. ಅಭಿವೃದ್ಧಿ ವಿಚಾರ ಹಾಗೂ ನಗರದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವುದಕ್ಕೆ ನಿಗದಿಯಾದ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರು ಸಹಕರಿಸದೆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರು ಎಂದರು. ಅಗತ್ಯ ದಾಖಲೆಗಳಿರುವ ನಿವೇಶನ ಮತ್ತು ಮನೆಗಳಿಗೆ ಇ-ಖಾತೆ ಮಾಡಲಾಗುತ್ತಿದೆ. ಇದರಲ್ಲಿ ದಲ್ಲಾಳಿಗಳ ಪಾತ್ರವಿಲ್ಲ. ನಗರಸಭೆ ಸ್ವತ್ತುಗಳ ರಕ್ಷಣೆಗೂ ಆದ್ಯತೆ ನೀಡುತ್ತಿರುವುದಾಗಿ ಅಧ್ಯಕ್ಷ ಜಗನ್ನಾಥ್ ಹೇಳಿದರು.

ಉಪಾಧ್ಯಕ್ಷೆ ರಾಣಿಯಮ್ಮ, ಸದಸ್ಯರಾದ ಜಗದೀಶ್, ರೇಖಾ ಉಮೇಶ್ ರೆಡ್ಡಪ್ಪ ಮತ್ತಿತರರು ಹಾಜರಿದ್ದರು.