ಕೊಪ್ಪಳ: ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂದಾಗಿದ್ದು, ಗೊಲ್ಲ ಸಮುದಾಯದಲ್ಲಿ ಒಡಕು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲಾ ಗೊಲ್ಲ (ಯಾದವ) ಸಂಘದ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿಎಂ ಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಆದೇಶ ಬದಲಾವಣೆಯಾಗಿದ್ದು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ತಯಾರಿ ನಡೆಸಿದ್ದಾರೆ. ಕಾಡುಗೊಲ್ಲ ಎಂಬುದು ಗೊಲ್ಲ ಸಮುದಾಯದ ಒಂದು ಉಪ ಪಂಗಡ. ವಕ್ಕಲಿಗ, ಲಿಂಗಾಯತ, ವಾಲ್ಮೀಕಿ ಸಮುದಾಯಗಳಲ್ಲಿ ಇರುವಂತೆ ನಮ್ಮ ಸಮುದಾಯದಲ್ಲೂ ಕೃಷ್ಣ ಗೊಲ್ಲ, ಹಂದಿ ಗೊಲ್ಲ, ಹಾವು ಗೊಲ್ಲ, ಗಂಗೆತ್ತು ಗೊಲ್ಲ ಪಂಗಡಗಳಂತೆ ಕಾಡುಗೊಲ್ಲ ಒಂದು. ಸರ್ಕಾರ ಇಡೀ ಸಮುದಾಯ ನಿರ್ಲಕ್ಷಿಸಿ ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಆದೇಶಿಸಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮತ ಬ್ಯಾಂಕ್ ದೃಷ್ಟಿ ಇಟ್ಟುಕೊಂಡು ನಿಗಮ ಸ್ಥಾಪಿಸುವುದನ್ನು ಕೈ ಬಿಡಬೇಕು. ಸಮುದಾಯದ ಎಲ್ಲರ ಅಭಿವೃದ್ಧಿಗೆ ಅನುಕೂಲವಾಗುವಂತೆ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಸಿಸಬೇಕು. ಕೂಡಲೇ ಆದೇಶ ತಿದ್ದುಡಿ ಮಾಡಿ ಆದೇಶಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಸಮುದಾಯದ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಣವಾನಂದ ಗಂಗಾವತಿ, ಯಮನೂರ ಕುಷ್ಟಗಿ, ಹನುಮೇಶ ಕುಷ್ಟಗಿ, ಮಾರುತಿ ಕಟಗಾಲಿ, ರವಿ ಕುರುಗೋಡ, ಪ್ರಾಣೇಶ್ ಪೂಜಾರ ಇತರರಿದ್ದರು.