ಬಳ್ಳಾರಿ ; ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತ ಮತ್ತು ವೈಫಲ್ಯತೆ ಖಂಡಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಜೆಡಿಎಸ್ ಪಕ್ಷ ಪಕ್ಷದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಮೀನಳ್ಳಿ ತಾಯಣ್ಣ ಮಾತನಾಡಿ, ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಹಿಂಗಾರುನಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯದ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿ, ಬಿತ್ತನೆಯಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿನ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಗೊಂಡಿದ್ದು, ನೀರಾವರಿ ಅಚ್ಚುಕಟ್ಟಿನಲ್ಲಿ ರೈತರು ಸಾಗುವಳಿ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಆದರೆ, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ. ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ರಸ ಗೊಬ್ಬರಗಳು ಕಾಳಸಂತೆಯಲ್ಲಿ ವರ್ತಕರು ಮನಸ್ಸಿಗೆ ಇಚ್ಛೆ ಬಂದ ತರಹದಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯಕ್ಕೆ ಕೊರತೆ ಇರುವ ರಸಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕ ಪಡೆಯಲು ವಿಫಲವಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 6.8 ಲಕ್ಷ ಟನ್ ರಸಗೊಬ್ಬರ ನಿಗದಿ ಮಾಡಿದ್ದು, ಈ ಪೈಕಿ ಕೇವಲ 5.27 ಲಕ್ಷ ಟನ್ ರಸಗೊಬ್ಬರ ನೀಡಿರುವುದಾಗಿ ಆಪಾದನೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಜನ ಜಾನುವಾರುಗಳಿಗೆ ಕುಡಿವ ನೀರು, ಆಹಾರ ಮತ್ತು ಮೇವಿನ ಕೊರತೆ ಎದುರಿಸುವ ಸನ್ನಿವೇಶ ಉಂಟಾಗಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚರ ವಹಿಸದೇ ತಿರಸ್ಕಾರ ಮನೋಭಾವ ಹೊಂದಿದೆ. ಅಲ್ಲದೇ, ಮುಂಬರುವ ತಿಂಗಳುಗಳಲ್ಲಿ ಅಗತ್ಯ ಮಳೆ ಬಿದ್ದರೆ, ಅಲ್ಪಾವಧಿ ಕಾಲದ ಬೆಳೆಯನ್ನು ಬೆಳೆಯಲ್ಲಿ ಯಾವುದೇ ಕಾರ್ಯಕ್ರಮ ರೂಢಿಸಿಲ್ಲ ಎಂದು ಆರೋಪಿಸಿದರು. ಬಳಿಕ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.