ಮೈಸೂರು: ಬಂಡೀಪುರ, ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ತಾಲೂಕುಗಳಲ್ಲಿ ವನ್ಯಜೀವಿ ಹಾವಳಿ ತಡೆಗಟ್ಟಲು ಸರ್ಕಾರ ವಿಫಲವಾಗಿದ್ದು, ಕೂಡಲೇ ಸರ್ಕಾರ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಂ. ಶಿವಣ್ಣ ಆಗ್ರಹಿಸಿದರು.
ಗುಂಡ್ಲುಪೇಟೆ, ಸರಗೂರು, ನಂಜನಗೂಡು, ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಹುಲಿ, ಆನೆ ದಾಳಿಯಿಂದ ಹತ್ತು ಜನರು ಮೃತಪಟ್ಟರೂ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆನೆ, ಹುಲಿ ಹಾವಳಿ ಹೆಚ್ಚಾಗಿರುವು ದರಿಂದ ಕಾಡಂಚಿನ ಗ್ರಾಮಸ್ಥರು ಜೀವ ಭಯದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿರಂತರ ಹುಲಿ ಹಾಗೂ ಆನೆಗಳು ಜನರ ಮೇಲೆ ದಾಳಿ ನಡೆಸುತ್ತಿದೆ. ಮತ್ತೊಂದೆಡೆ ರೈತರು ಬೆಳೆದ ಬೆಳೆಗಳು ವನ್ಯಪ್ರಾಣಿಗಳು ನಾಶ ಪಡಿಸುತ್ತಿವೆ. ಆದರೆ, ಅರಣ್ಯ ಇಲಾಖೆ ವನ್ಯಪ್ರಾಣಿಗಳ ಹಾವಳಿ ತಡೆಯಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷೃ ನೋಡಿದರೆ ಇಲಾಖೆ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡಿದೆ. ಅರಣ್ಯ ಸಚಿವರು ಅರಣ್ಯ ವಿಚಾರ ಗಳನ್ನು ಮರೆತು ಬೇರೆ ವಿಚಾರಗಳಲ್ಲಿ ಮಗ್ನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿದ್ದು ಕೊಂಡು ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ, ಇದುವರೆಗೆ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.